ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಪೊಲೀಸರು ನ್ಯಾಯಾಲಯಕ್ಕೆ 1300 ಪುಟಗಳ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದ್ದಾರೆ.
ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಚಂದನ್ ಕುಮಾರ್ ವಿಧಿ ವಿಜ್ಞಾನ ಪ್ರಯೋಗಾಲಯದ (ಸಿಎಫ್‌ಎಸ್‌ಎಲ್) ವರದಿಗಳು ಮತ್ತು ಆರೋಪಿಗಳ ಮೊಬೈಲ್ ಫೋನ್‌ಗಳಿಂದ ಡಿಜಿಟಲ್ ಸಾಕ್ಷ್ಯಗಳನ್ನು ಒಳಗೊಂಡ ಹೆಚ್ಚುವರಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪೊಲೀಸರು 3991 ಪುಟಗಳನ್ನು ಒಳಗೊಂಡ ಮೊದಲ ಆರೋಪಪಟ್ಟಿಯನ್ನು ಸೆಪ್ಟೆಂಬರ್ 4 ರಂದು ಸಲ್ಲಿಸಿದ್ದರು. ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಕೆಲವು ಆರೋಪಿಗಳ ವಿರುದ್ಧ, ಪ್ರಮುಖವಾಗಿ ಪ್ರಕರಣದ ಆರೋಪಿ ನಂಬರ್ 2 ಆಗಿರುವ ನಟ ದರ್ಶನ್ ತೂಗುದೀಪ ವಿರುದ್ಧ ತಾಂತ್ರಿಕ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳಿವೆ ಎಂದು ತಿಳಿದುಬಂದಿದೆ. ನಟ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರ ಬೆನ್ನಲ್ಲೆ ಇಂದು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿಕೆ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ನಡೆದ ಜಾಗದಲ್ಲಿ ನಟ ದರ್ಶನ್ ಇದ್ದ ಬಗ್ಗೆ ಫೋಟೋ ಸಿಕ್ಕ ಹಿನ್ನೆಲೆ ದರ್ಶನ್ ಜಾಮೀನು ರದ್ದತಿ ಬಗ್ಗೆ ಕ್ರಮ ಜರುಗಿಸುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ದರ್ಶನ್ ಜತೆಗಿದ್ದ ಇತರೆ ಆರೋಪಿಗಳ ಮೊಬೈಲ್ ಫೋನ್ ಗಳನ್ನು ಎಫ್ ಎಸ್ ಎಲ್ ವರದಿಗಾಗಿ ಹೈದರಾಬಾದ್ ಗೆ ಕಳುಹಿಸಲಾಗಿತ್ತು. ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಇರುವ ಫೋಟೋಗಳು ಲಭ್ಯವಾಗಿದೆ. ಮೇಲ್ನೋಟಕ್ಕೆ ದರ್ಶನ್ ಪಾತ್ರ ದೊಡ್ಡದಾಗಿ ಕಾಣುತ್ತಿದೆ. ಹೀಗಾಗಿ ದರ್ಶನ್ ಜಾಮೀನು ರದ್ದು ಮಾಡುವಂತೆ ಕೋರ್ಟ್ ಗೆ ಮನವಿ ಸಲ್ಲಿಸುತ್ತೇವೆ ಯಾರೋ ಜೊತೆಯಲ್ಲಿದ್ದವನು ವಿಡಿಯೊ ಮಾಡಿಕೊಂಡಿದ್ದ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಜಾಮೀನು ರದ್ದುಪಡಿಸಬೇಕು, ಮುಂದಿನ ಕ್ರಮದ ಬಗ್ಗೆ ತನಿಖೆ ನಡೆಯುತ್ತಿದೆ, ಇಷ್ಟು ದಿನವಾದರೂ ದರ್ಶನ್ ಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಲ್ಲ, ಕೋರ್ಟ್ ಈ ಬಗ್ಗೆ ಗಮನ ಹರಿಸಿ ಸೂಕ್ತ ಆದೇಶ ನೀಡಬೇಕು ಎಂದು ಪರಮೇಶ್ವರ್ ಹೇಳಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದಕ್ಕೆ ಅವರ ಅಭಿಮಾನಿ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವ್ಯಕ್ತಿಗೆ ಮಂಡ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ‘ನಾನು ನಿಖಿಲ್ ಅಭಿಮಾನಿ, ನನ್ನ ಸಾವಿಗೆ ನಾನೇ ಕಾರಣ, ಜೈ ಜೆಡಿಎಸ್’ ಎಂದು ಪತ್ರ ಮಂಜುನಾಥ್ ಪತ್ರದಲ್ಲಿ ಬರೆದಿದ್ದರು. ಆತ್ಮಹತ್ಯೆಗೆ ಯತ್ನಿಸಿದ ಮಂಜುನಾಥ್ ಅವರನ್ನು ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿ ಮಾತನಾಡಿಸಿದ್ದಾರೆ. ಕರ್ನಾಟಕದ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಕರ್ನಾಟಕ ಸರ್ಕಾರ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರಿಗೆ 38 ತಿಂಗಳ ಅರಿಯರ್ಸ್ ಬಾಕಿ ಹಣ ಬಿಡುಗಡೆ ಮಾಡದೇ ಇರುವುದನ್ನು ಖಂಡಿಸಿ ಸಾರಿಗೆ ನೌಕರರು ಮತ್ತೊಮ್ಮೆ ಸಾರಿಗೆ ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒತ್ತಡ ಹಾಕುವ ಸಂಬಂಧ ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಭೆ ನಡೆಸಿದೆ. ಈ ಬಗ್ಗೆ ಮಾತನಾಡಿರುವ ಸಮಿತಿಯ ಮುಖಂಡ, ಅನಂತ್ ಸುಬ್ಬರಾವ್ ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಮೂರು ದಿನ ಮುಷ್ಕರ ನಡೆದಿತ್ತು. ಈ ಬಾರಿ ಆ ಪರಿಸ್ಥಿತಿ ತರಬೇಡಿ. ಈಗಾಗಲೇ ಸಾರಿಗೆ ನೌಕರರು ಮುಷ್ಕರ ಮಾಡುವ ಮನಸ್ಥಿತಿಯಲ್ಲಿದ್ದಾರೆ. ಇಲ್ಲಿಯವರೆಗೆ ನಮಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ನಾವು ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವಿಗೆ ಬಿಜೆಪಿ, ಜೆಡಿಎಸ್‌ನವರು ಬೆಂಬಲ ನೀಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. "ಪರೋಕ್ಷವಾಗಿ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್ ಬಿಜೆಪಿ ಅವರು ಬೆಂಬಲ ನೀಡಿದ್ದಾರೆ. ಯೋಗೇಶ್ವರ್ ಗೆಲ್ತಾರೆ ಅಂತ ಗೊತ್ತಿತ್ತು ಅಂತ ಅಶ್ವಥ್ ನಾರಾಯಣ್ ಹೇಳಿಲ್ವಾ, ಇದರ ಅರ್ಥ ಏನು? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಕ್ಷೇತ್ರದ ಜನರಿಗೆ ಏನು ಮಾತು ಕೊಟ್ಟಿದ್ದೆವೋ ಅದನ್ನ ಮೊದಲು ಜಾರಿ ಮಾಡಬೇಕು. ನಾನು ಯೋಗೇಶ್ವರ್ ಕೂತು ಚರ್ಚೆ ಮಾಡಿ ಇದಕ್ಕೆಲ್ಲ ಚಾಲನೆ ಕೊಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
Advertisement