ಬೆಂಗಳೂರು: ರಾಜ್ಯದ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ, ದೇವಿಗೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಅದಕ್ಕಾಗಿಯೇ ಮೈಸೂರಿನಲ್ಲಿ ನಡೆಯುವ ದಸರಾವನ್ನು ನಾಡ ಹಬ್ಬ ಎಂದು ಕರೆಯಲಾಗುತ್ತದೆ. ಈ ನಾಡದೇವಿಯನ್ನು ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕು ಎಂಬುದು ಭಕ್ತರ ಬೇಡಿಕೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ(ಎಂಎಲ್‌ಸಿ) ದಿನೇಶ್ ಗೂಳಿಗೌಡ ಅವರು ಸಿಎಂ ಸಲ್ಲಿಸಿದ್ದ ಮನವಿಯನ್ನು ಅನುಸರಿಸಿ ಈ ನಿರ್ದೇಶನ ನೀಡಲಾಗಿದೆ.
ತಮಿಳುನಾಡಿನ ಕೊಯಮತ್ತೂರಿನ ಭಕ್ತರು ಕೊಡುಗೆಯಾಗಿ ನೀಡಿದ ಮರದ ರಥವು ಕಾಲಾನಂತರದಲ್ಲಿ ಹಾಳಾಗಿದೆ. ಹೀಗಾಗಿ ಹೊಸದಾಗಿ ಚಿನ್ನದ ರಥ ಮಾಡಿಸುವ ಅಗತ್ಯ ಇದೆ ಎಂದು ಗೂಳಿಗೌಡ ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದರು.
ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥವನ್ನು ಬಳಸಿ ರಥೋತ್ಸವ ಆಯೋಜಿಸುವ ಇಚ್ಛೆಯನ್ನು ಭಕ್ತರು ವ್ಯಕ್ತಪಡಿಸಿದ್ದಾರೆ. ಈ ಪ್ರಸ್ತಾವನೆಯು ಕೆಲವು ಸಮಯದಿಂದ ಪರಿಗಣನೆಯಲ್ಲಿದ್ದು, ಅಂದಾಜು 100 ಕೋಟಿ ರೂ. ವೆಚ್ಚವಾಗಲಿದೆ. ಚಿನ್ನದ ರಥಕ್ಕೆ ಭಕ್ತರು ಕೊಡುಗೆ ನೀಡಲು ಸಿದ್ಧರಿರುವುದರಿಂದ ಸರ್ಕಾರ ಚಿನ್ನದ ರಥ ನಿರ್ಮಾಣಕ್ಕೆ ಬೇಕಾದ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ತಯಾರಿಸಬೇಕು ಎಂದು ಗೂಳಿಗೌಡ ಅವರು ಮನವಿ ಮಾಡಿದ್ದರು.
2025ರ ದಸರಾ ಮಹೋತ್ಸವಕ್ಕೆ ಈ ರಥೋತ್ಸವ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಗೂಳಿಗೌಡ ಅವರು ಕೇಳಿಕೊಂಡಿದ್ದಾರೆ.
Advertisement