ಬೀದರ್ ನಲ್ಲಿ ಬಿಜೆಪಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಿಜೆಪಿ ಬಣ 5 ಜಿಲ್ಲೆಗಳಲ್ಲಿ ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಇಂದು ಚಾಲನೆ ನೀಡಿದೆ. ‘ವಕ್ಫ್ ಹಠಾವೋ ಭಾರತ ದೇಶ ಬಚಾವೋ’ ಎಂಬ ಘೋಷವಾಕ್ಯದಡಿ ಈ ಹೋರಾಟ ಆರಂಭಿಸಿದೆ. ಇತ್ತೀಚೆಗೆ ವಿಜಯೇಂದ್ರ ಅವರು ದೆಹಲಿಗೆ ಭೇಟಿ ನೀಡಿ ಭಿನ್ನ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದರು. ಆದರೆ ಇದಕ್ಕೂ ಜಗ್ಗದ ಯತ್ನಾಳ್ ಬಣ ಪ್ರತ್ಯೇಕ ಹೋರಾಟ ಆರಂಭಿಸಿದೆ. ಡಿಸೆಂಬರ್ 1 ರವರೆಗೆ 5 ಜಿಲ್ಲೆಗಳಲ್ಲಿ ವಕ್ಫ್ ವಿರುದ್ಧದ ಅಭಿಯಾನ ನಡೆಯಲಿದೆ. ಡಿ. 9ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವಕ್ಫ್‌ನಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಯತ್ನಾಳ್ ತಂಡ ಮುಂದಾಗಿದೆ.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಹಗರಣದ ವಿಚಾರಣೆ ಎದುರಿಸುತ್ತಿದ್ದ ಅಧಿಕಾರಿಯೊಬ್ಬರು ತಮ್ಮನ್ನು ವಿವಸ್ತ್ರಗೊಳಿಸಿದ್ದರೆಂದು ಆರೋಪಿಸಿ ಮಹಿಳಾ ವಕೀಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಡಿವೈಎಸ್ ಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಡಿವೈಎಸ್ಪಿ 25 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ ಜೀವ ಪತ್ರದಲ್ಲಿ ಬರೆದಿಟ್ಟಿದ್ದಾರೆ. ಈ ಪತ್ರದ ಆಧಾರದಲ್ಲಿ ಅಪರಾಧ ತನಿಖಾ ವಿಭಾಗದ ಡಿವೈಎಸ್‌ಪಿ ಕನಕಲಕ್ಷ್ಮಿ ವಿರುದ್ಧ ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಶೀಘ್ರದಲ್ಲೇ ಆತ್ಮಹತ್ಯೆ ಪತ್ರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಿದ್ದಾರೆ. ಹೆಚ್ಚಿನ ತನಿಖೆಗಾಗಿ ತನಿಖಾಧಿಕಾರಿಗೆ (ಐಒ) ನೋಟಿಸ್ ನೀಡಲಿದ್ದಾರೆ.
ದೇಶಾದ್ಯಂತ ವಕ್ಫ್ ಆಸ್ತಿಗಳನ್ನು ಕಬಳಿಸಲು ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ, 2024 ಅನ್ನು ಸಿದ್ಧಪಡಿಸಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಆರೋಪಿಸಿದೆ. ಬೆಂಗಳೂರಿನಲ್ಲಿ ಎಐಎಂಪಿಎಲ್‌ಬಿಯ 29ನೇ ಸಮಾವೇಶದ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಎಐಎಂಪಿಎಲ್‌ಬಿ ವಕ್ತಾರ ಎಸ್ ಕ್ಯೂ ಆರ್ ಇಲ್ಯಾಸ್, ವಕ್ಫ್ ಕುರಿತ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಸಹ ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿಲ್ಲ ಆರೋಪ ಮಾಡಿದ್ದಾರೆ. ಮುಸ್ಲಿಮರು ಷರಿಯಾ ಕಾನೂನಿನೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲವಾದ್ದರಿಂದ ಏಕರೂಪ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ ಎಂಬುದನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸ್ಪಷ್ಟಪಡಿಸುತ್ತದೆ ಎಂದು ಇಲ್ಯಾಸ್ ಹೇಳಿದ್ದಾರೆ.
ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೂಚನೆ ನೀಡಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ತಿಳಿಸಿದ್ದ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿಯನ್ನು ಆಧರಿಸಿ ಸಿಎಂ ಈ ನಿರ್ದೇಶನ ನೀಡಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನ ಭಕ್ತರು ಕೊಡುಗೆಯಾಗಿ ನೀಡಿದ ಮರದ ರಥವು ಕಾಲಾನಂತರದಲ್ಲಿ ಹದಗೆಟ್ಟಿದೆ. ಆದ್ದರಿಂದ ಹೊಸ ರಥ ನಿರ್ಮಿಸಬೇಕು ಎಂದು ದಿನೇಶ್ ಗೂಳಿಗೌಡ ಮನವಿ ಸಲ್ಲಿಸಿದ್ದರು. ಈ ಪ್ರಸ್ತಾವನೆ ಕೆಲವು ಸಮಯದಿಂದ ಪರಿಗಣನೆಯಲ್ಲಿದ್ದು, 100 ಕೋಟಿ ರೂ ವೆಚ್ಚ ಅಂದಾಜಿಸಲಾಗಿದೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕಲಾವಿದರಿದ್ದ ಮಿನಿ ಬಸ್ ಅಪಘಾತಕ್ಕೀಡಾಗಿದೆ. ಶೂಟಿಂಗ್ ಸಲುವಾಗಿ ಜ್ಯೂನಿಯರ್ ಕಲಾವಿದರನ್ನು ಮಿನಿ ಬಸ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಪಲ್ಟಿಯಾಗಿದ್ದು, 6 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾಂತಾರಾ ಚಿತ್ರದ ಶೂಟಿಂಗ್, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿನ ಪ್ರಾಂತ್ಯಗಳಲ್ಲಿ ಭರದಿಂದ ಶೂಟಿಂಗ್ ನಡೆಸಿತ್ತು.
ವೇತನ ಹೆಚ್ಚಳ, ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ 4 ನಿಗಮಗಳ ಸಾರಿಗೆ ನೌಕರರು ಡಿ.31ರಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ.ಕೈಗಾರಿಕಾ ವಿವಾದ ಕಾಯಿದೆ ಸೆಕ್ಷನ್- 22 ರ ಪ್ರಕಾರ, ಮುಷ್ಕರಕ್ಕೂ ಮುನ್ನ 21 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಈ ಹಿನ್ನೆಲೆಯಲ್ಲಿ ಡಿ.9 ರಂದು ನೋಟಿಸ್ ಕೊಟ್ಟು ಡಿ.31 ರಿಂದ ಸಾರಿಗೆ ಮುಷ್ಕರ ಮಾಡಲು ನಿರ್ಧರಿಸಲಾಗಿದೆ ಎಂದು ನೌಕರರ ಹಿರಿಯ ಮುಖಂಡ ಅನಂತ ಸುಬ್ಬರಾವ್ ತಿಳಿಸಿದ್ದಾರೆ.
Advertisement