ಮಡಿಕೇರಿ: ‘ಕೊಡವಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಮತ್ತು ವಿಶಿಷ್ಟ ಸಂಸ್ಕೃತಿ ಹೊಂದಿರುವ ಕೊಡವ ಸಮುದಾಯಕ್ಕೆ ಎಸ್ ಟಿ ಸ್ಥಾನಮಾನ ನೀಡುವುದು ಇಂದಿನ ಅಗತ್ಯವಾಗಿದೆ’ ಎಂದು ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್ ಸಿ) ಅಧ್ಯಕ್ಷ ಎನ್ .ಯು.ನಾಚಪ್ಪ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಮಡಿಕೇರಿಯಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ನಡೆದ 34ನೇ ವರ್ಷದ ಕೊಡವ ರಾಷ್ಟ್ರೀಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ನಾಚಪ್ಪ ಅವರು, "ಕೊಡವರು ವಿಶಿಷ್ಟ ಸಂಸ್ಕೃತಿ ಮತ್ತು ಆಚರಣೆಗಳನ್ನು ಹೊಂದಿದ್ದಾರೆ. ಈ ಸಮುದಾಯವನ್ನು ಸಂರಕ್ಷಿಸುವುದು ಅವಶ್ಯಕವಾಗಿದೆ ಮತ್ತು ಈ ನಿಟ್ಟಿನಲ್ಲಿ ಹಲವಾರು ಹಕ್ಕುಗಳನ್ನು ಭಾರತೀಯ ಸಂವಿಧಾನವು ನಮಗೆ ನೀಡಿದೆ ಎಂದರು.
ಕೊಡವ ಸಮುದಾಯವನ್ನು ರಕ್ಷಿಸಲು ST ಟ್ಯಾಗ್ ನೀಡಬೇಕು ಎಂದು ಆಗ್ರಹಿಸಿದ ನಾಚಪ್ಪ, ಸಿಎನ್‌ಸಿ ಮೂರು ದಶಕಗಳಿಂದ ಇದಕ್ಕಾಗಿ ಹೋರಾಟ ನಡೆಸುತ್ತಿದೆ ಮತ್ತು ಸಂವಿಧಾನದ ಮೂಲಕ ಹಕ್ಕುಗಳನ್ನು ಪಡೆಯಲು ಶ್ರಮಿಸುತ್ತಿದೆ ಎಂದು ಹೇಳಿದರು.
“ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಬಲವಾಗಿದೆ. ಕೊಡವರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸದಿದ್ದರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯಾಗಲಿದೆ. ಕೊಡವರು ಮೂಲತಃ ಕೊಡಗಿನವರು, ಇದು ನಮ್ಮ ಸಾಂಪ್ರದಾಯಿಕ ತಾಯ್ನಾಡು. ಕೊಡಗು ಮತ್ತು ಕೊಡವ ನಾಡು ಬೇರೆ ಎಂಬುದನ್ನು ಅರ್ಥಮಾಡಿಕೊಳ್ಳಿ’’ ಎಂದರು.
ಜಿಲ್ಲೆಯ ಅನೇಕ ಕೊಡವ ನಿವಾಸಿಗಳು ತಮ್ಮ ಆಸ್ತಿಯನ್ನು ಹೊರಗಿನವರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘‘ಇಂದಿನ ಬಹುತೇಕ ಸರ್ಕಾರಿ ಜಮೀನು, ಖಾಸಗಿ ನಿವೇಶನಗಳು ಕೊಡವರಿಗೆ ಸೇರಿದ್ದು. ಅವುಗಳನ್ನು ವ್ಯವಸ್ಥಿತವಾಗಿ ಸ್ವಾಧೀನಪಡಿಸಿಕೊಂಡು ಕೊಡವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಕೊಡವರು ಇದನ್ನು ಅರಿತು ಸಂಘಟಿತರಾಗಬೇಕು. ಇಲ್ಲದಿದ್ದರೆ ನಮ್ಮ ಭೂಮಿ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ’’ ಎಂದು ಎಚ್ಚರಿಸಿದರು.
ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ, "ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳ ಮರು ವಿಂಗಡಣೆ ನಡೆಯುತ್ತದೆ. ಪ್ರತ್ಯೇಕ ಲೋಕಸಭಾ ಕ್ಷೇತ್ರದ ಹಿಂದೆ ರಾಜಕೀಯ ತಂತ್ರವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸ್ಥಳೀಯ ಸಮುದಾಯಗಳಿಗೆ ದೇಶದ ವಿವಿಧ ಭಾಗಗಳಲ್ಲಿ ಪ್ರತ್ಯೇಕ ಲೋಕಸಭಾ ಸ್ಥಾನಗಳನ್ನು ನೀಡಲಾಗಿದೆ. ಅದರಂತೆ ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನ ನೀಡಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಕೊಡಗಿಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸ್ಥಾಪನೆ, ಕೊಡವ ಸಮುದಾಕ್ಕೆ ಎಸ್ ಟಿ ಸ್ಥಾನಮಾನ, ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಸಿಎನ್‌ಸಿ ನಿರ್ಣಯ ಅಂಗೀಕರಿಸಿದೆ.
Advertisement