ವಕ್ಫ್ ವಿರುದ್ಧ ಹೋರಾಟ ಮಾಡಿದರೆ ನಿಮಗೇಕೆ ಭಯ? BSY, BYV ಗೆ ಯತ್ನಾಳ್ ಪ್ರಶ್ನೆ; ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ- ಸಿಎಂ; ಫೆಂಗಲ್ ಚಂಡಮಾರುತi ಮೂರು ದಿನಗಳ ಕಾಲ ಮಳೆ; ಇವು ಇಂದಿನ ಪ್ರಮುಖ ಸುದ್ದಿಗಳು 26-11-2024

News bulletin
ಸುದ್ದಿ ಮುಖ್ಯಾಂಶಗಳು online desk

1. Fengal ಚಂಡಮಾರುತ ರಾಜ್ಯದಲ್ಲಿ ಮೂರು ದಿನಗಳ ಕಾಲ ಮಳೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ಫೆಂಗಲ್ ಚಂಡಮಾರುತ ಕೆಲವೇ ಗಂಟೆಗಳಲ್ಲಿ ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದ್ದು, ತಮಿಳುನಾಡಿನಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ತಮಿಳುನಾಡು ಮಾತ್ರವಲ್ಲದೇ ಕರ್ನಾಟಕದಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಂಡಮಾರುತದ ಪರಿಣಾಮ ಬೆಂಗಳೂರಿನ ಮೇಲೂ ಗೋಚರಿಸಲಿದ್ದು, ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ 28.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

2. ನೆಲಮಂಗಲ: ಎರಡು ಚಿರತೆ ಸೆರೆ 

ನೆಲಮಂಗಲದ ಕಂಬಾಳು ಗೊಲ್ಲರಹಟ್ಟಿ ಗ್ರಾಮದಲ್ಲಿ ಅರಣ್ಯ ಇಲಾಖೆ ಎರಡು ಚಿರತೆಗಳನ್ನು ಸೆರೆ ಹಿಡಿದಿದೆ. ಕಳೆದ ವಾರ ಶಿವಗಂಗೆ ಬೆಟ್ಟದ ಬಳಿ 52 ವರ್ಷದ ಮಹಿಳೆಯೊಬ್ಬರನ್ನು ಚಿರತೆ ಕೊಂದುಹಾಕಿತ್ತು. ಮಂಗಳವಾರ ಇದೇ ಪ್ರದೇಶದಲ್ಲಿ ಒಂಬತ್ತು ವರ್ಷದ ಹೆಣ್ಣು ಚಿರತೆ ಸೆರೆ ಸಿಕ್ಕಿದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. ಚಿರತೆಗಳ ರಕ್ತ ಮತ್ತು ಕೂದಲಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳನ್ನು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆರೆಹಿಡಿಯಲಾದ ಚಿರತೆಗಳಲ್ಲಿ ಯಾವುದಾದರೂ ಒಂದು ಚಿರತೆ ಮಹಿಳೆ ಮೇಲೆ ದಾಳಿ ಮಾಡಿರುವ ಸಾಧ್ಯತೆ ಇದ್ದು, ಅದನ್ನು ಡಿಎನ್‌ಎ ಪರೀಕ್ಷೆ ಮೂಲಕ ನಿರ್ಧರಿಸಲಾಗುವುದು ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

3. ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ- ಸಿಎಂ

ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 75ನೇ ವರ್ಷದ ಸಂವಿಧಾನ ದಿನಾಚರಣೆ ಅಂಗವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಲ್ಲ ಮಕ್ಕಳಿಗೂ ಸಂವಿಧಾನ ಅರ್ಥವಾಗಬೇಕು. ಹೀಗಾಗಿ ಶಾಲೆಗಳಲ್ಲೇ ಸಂವಿಧಾನ ಪೀಠಿಕೆ ಓದಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಸಂವಿಧಾನ ಜಾರಿಗೆ ಬಂದು ಜನವರಿಗೆ 75 ವರ್ಷ ತುಂಬಲಿದೆ. ದೀರ್ಘಕಾಲದ ಶಾಂತಿಯಲ್ಲಿರುವ ಸಂವಿಧಾನ ಎಂದರೆ ಅದು ಭಾರತದ ಸಂವಿಧಾನ. ಸಂವಿಧಾನ ವಿರೋಧಿಗಳು ಅದನ್ನು ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ. ಆದರೆ ನಮ್ಮ ಪಕ್ಷ ಅದರ ರಕ್ಷಣೆಗಾಗಿ ಹೋರಾಡುತ್ತಿದೆ. ಈ ಬಗ್ಗೆ ನಮಗೆ ಎಚ್ಚರಿಕೆ ಇರಬೇಕು. ಸಂವಿಧಾನ ಜಾರಿಗೆ ಹಿಂದೂ ಮಹಾ ಸಭಾದ ಸಾವರ್ಕರ್, ಗೋಳ್ವಾಳ್ಕರ್ ಆರ್.ಎಸ್.ಎಸ್‌ ವಿರೋಧಿಸಿದ್ದರು. ಸಂವಿಧಾನ ವಿರೋಧಿಗಳು ಮತ್ತೆ ಮನುಸ್ಮೃತಿ ಜಾರಿಗೆ ಈಗಲೂ ಹುನ್ನಾರ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

4. ರಾಜ್ಯದ 10 ನಗರಗಳ ಪ್ರಮುಖ ಉದ್ಯಾನವನಗಳಲ್ಲಿ ಸಂವಿಧಾನ ಪೀಠಿಕೆ ಪ್ರತಿಕೃತಿ

ಸಂವಿಧಾನದ ಅರಿವು ಮೂಡಿಸುವ ಭಾಗವಾಗಿ ಬೆಂಗಳೂರು ಸೇರಿದಂತೆ ರಾಜ್ಯದ 10 ನಗರಗಳ ಪ್ರಮುಖ ಉದ್ಯಾನವನಗಳಲ್ಲಿ ಸಂವಿಧಾನ ಪೀಠಿಕೆ ಪ್ರತಿಕೃತಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ 3 ಕೋಟಿ ರೂಪಾಯಿ ವೆಚ್ಚವಾಗಲಿದ್ದು ಬೆಂಗಳೂರು, ಶಿವಮೊಗ್ಗ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ತುಮಕೂರು ಮತ್ತು ವಿಜಯಪುರದಲ್ಲಿ ಈ ಪ್ರತಿಕೃತಿಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಿರ್ಮಾಣ ಮಾಡಲಾಗುತ್ತದೆ.

5. ವಕ್ಫ್ ವಿರುದ್ಧ ಹೋರಾಟ ಮಾಡಿದರೆ ನಿಮಗೇಕೆ ಭಯ? BSY, BYV ಗೆ ಯತ್ನಾಳ್ ಪ್ರಶ್ನೆ

ಬಿಜೆಪಿಯಲ್ಲಿನ ಭಿನ್ನಮತ ತಾರಕಕ್ಕೇರಿದ್ದು, ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಪ್ರತ್ಯೇಕವಾಗಿ ಚಾಲನೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಕ್ಫ್ ವಿರುದ್ಧದ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್, ಇಲ್ಲಿ ಯಾರೂ ಸಿಎಂ ಆಗೋಕೆ ಹೋರಾಟ ಮಾಡುತ್ತಿಲ್ಲ. ನಾವು ವಕ್ಫ್ ವಿರುದ್ಧ ಹೋರಾಟ ಮಾಡಿದ್ರೆ ನಿಮಗ್ಯಾಕೆ ಭಯ, ಟೆನ್ಶನ್ ಎಂದು ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ನಾಯಕರ ಗುಂಪು ವಕ್ಫ್ ವಿಚಾರವಾಗಿ ಪ್ರತ್ಯೇಕ ಹೋರಾಟ ನಡೆಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಯಡಿಯೂರಪ್ಪ ಹೋರಾಟ ಕೈಬಿಟ್ಟು ಪಕ್ಷ ಬಲಪಡಿಸಲು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಮನವಿ ಮಾಡಿದ್ದರು.

6. ಚಾಕುವಿನಿಂದ ಇರಿದು ಪ್ರೇಯಸಿ ಹತ್ಯೆ ಮಾಡಿ ಪರಾರಿಯಾದ ಯುವಕ

ಯುವಕನೊಬ್ಬ ತನ್ನ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಇಂದಿರಾ ನಗರದ ಸರ್ವಿಸ್ ಅಪಾರ್ಟ್ ಮೆಂಟ್ನಲ್ಲಿ ನಡೆದಿದೆ. ಅಸ್ಸಾಂ ಮೂಲದ ಮಾಯಾ ಗೊಗೋಯಿ ಕೊಲೆಯಾದ ಯುವತಿಯಾಗಿದ್ದು, ಆರವ್ ಹಾರ್ನಿ ಎಂಬ ಯುವಕ ಮಾಯಾಳನ್ನು ಕೊಂದು, ಶವದ ಜತೆ ಒಂದು ದಿನ ಕಳೆದು ಮಾರನೇ ದಿನ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಇಂದಿರಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com