ಮುಡಾ ಹಗರಣಕ್ಕೆ ಹೊಸ ಟ್ವಿಸ್ಟ್: ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಕೇಸ್ ದಾಖಲು
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಬಿಎಂ ಭಾಗಿಯಾಗಿರುವ ಮುಡಾ ಹಗರಣ ಹೊಸ ತಿರುವು ಪಡೆದುಕೊಂಡಿದ್ದು, ಮಹಿಳೆಯೊಬ್ಬರು ಸಿಎಂ ಪತ್ನಿ ವಿರುದ್ಧ ಸಿವಿಲ್ ಮೊಕದ್ದಮೆ ದಾಖಲಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮೈಸೂರಿನ ಕೆಸರೆ ಗ್ರಾಮದಲ್ಲಿ ಪಾರ್ವತಿ ಬಿಎಂ ಅವರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಬದಲಾಗಿ 14 ನಿವೇಶನಗಳನ್ನು ಸಿಎಂ ಪತ್ನಿಗೆ ಮಂಜೂರು ಮಾಡಿತ್ತು. ಆದರೆ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ನಂತರ ಪಾರ್ವತಿ ಅವರು 14 ನಿವೇಶನಗಳನ್ನು ವಾಪಸ್ ಮುಡಾಗೆ ನೀಡಿದ್ದಾರೆ.
ಕೆಸರೆ ಭೂಮಿಯನ್ನು ಪಾರ್ವತಿ ಅವರಿಗೆ ಅವರ ಸಹೋದರ ಮಲ್ಲಿಕಾರ್ಜುನಸ್ವಾಮಿ ಉಡುಗೊರೆಯಾಗಿ ನೀಡಿದ್ದರು. ಈ ಭೂಮಿಯನ್ನು ಮಲ್ಲಿಕಾರ್ಜುನಸ್ವಾಮಿ ಅವರು ದೇವರಾಜು ಎಂಬುವರಿಂದ ಖರೀದಿಸಿದ್ದರು.
ಇದೀಗ ದೇವರಾಜು ಅವರ ಅಣ್ಣ ಮೈಲಾರಯ್ಯ ಅವರ ಮಗಳು ಜಮುನಾ ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರ ಹೆಸರಿನಲ್ಲಿರುವ ಜಮೀನು ದೇವರಾಜು ಅವರದ್ದು ಅಲ್ಲ, ಬದಲಿಗೆ ನಮ್ಮ ತಂದೆ ಮೈಲಾರಯ್ಯ ಅವರಿಗೆ ಸೇರಿದ್ದು ಎಂದು ಜಮುನಾ ದಾವೆ ಹೂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸೇರಿದಂತೆ 12 ಜನರ ವಿರುದ್ಧ ಸಿವಿಲ್ ಕೇಸ್ ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ಜಮುನಾ ಅವರು ಪಾರ್ವತಿಯಿಂದ ಮುಡಾ ಸ್ವಾಧೀನಪಡಿಸಿಕೊಂಡ ಭೂಮಿಯ ಮೇಲೆ ತಮ್ಮದೂ ಹಕ್ಕು ಇದೆ ಹೇಳಿದ್ದಾರೆ.
“ನಮ್ಮ ಚಿಕ್ಕಪ್ಪ ದೇವರಾಜು ಮೋಸದಿಂದ ಜಮೀನು ಮಾರಾಟ ಮಾಡಿದ್ದಾರೆ. ಜಮೀನು ಮೊದಲು ನನ್ನ ತಂದೆ ಮೈಲಾರಯ್ಯ ಅವರ ಹೆಸರಿನಲ್ಲಿ ಇತ್ತು. ನಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ ಎಂದು ನಮ್ಮ ಚಿಕ್ಕಪ್ಪ ದೇವರಾಜು ನನ್ನ ಹಾಗೂ ನನ್ನ ತಾಯಿ ಬಳಿ ಸಹಿ ಪಡೆದುಕೊಂಡರು. ನನ್ನ ರೀತಿ ನನ್ನ ಸಹೋದರಿ ಜಮುನಾಗು ಅನ್ಯಾಯವಾಗಿದೆ” ಎಂದು ಜಮುನಾ ಅವರ ಸಹೋದರ ಮಂಜುನಾಥಸ್ವಾಮಿ ಹೇಳಿದ್ದಾರೆ.