ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ 20 ವರ್ಷದ ಯುವತಿಯನ್ನು ಮದುವೆಯಾಗಿದ್ದ 40 ವರ್ಷದ ವ್ಯಕ್ತಿಯನ್ನು ಯುವತಿಯ ಪೋಷಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕೊಲೆ ಮಾಡಿದ ಆರೋಪದ ಮೇಲೆ ಯುವತಿ ಕುಟುಂಬದ ಆರು ಮಂದಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದು, 20 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಚಿತ್ರದುರ್ಗ ನಗರ ಸಮೀಪದ ಕೊಣನೂರು ಗ್ರಾಮದ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಭರಮಸಾಗರ ಪೊಲೀಸರು 20 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.
ಮಂಜುನಾಥ್‌ಗೆ ಇದು ಎರಡನೇ ಮದುವೆಯಾಗಿದ್ದು, ಈ ಶಿಲ್ಪಾ ಎಂಬಾಕೆಯನ್ನು ಮದುವೆಯಾಗಿ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಿಲ್ಪಾ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಮಂಜುನಾಥ್ ಜೈಲು ಸೇರಿದ್ದ.
ಜೈಲಿನಿಂದ ಹೊರಬಂದ ನಂತರ, ಪಕ್ಕದ ಮನೆಯ ಯುವತಿಯೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದ ಮಂಜುನಾಥ್, ಓಡಿ ಹೋಗಿ ಆಕೆಯೊಂದಿಗೆ ಮದುವೆ ಮಾಡಿಕೊಂಡಿದ್ದರು.
ಆದರೆ ಯುವತಿ ಪೋಷಕರು ಕರೆ ಮಾಡಿ ಎಲ್ಲರ ಸಮ್ಮುಖದಲ್ಲೇ ಮದ್ವೆ ಮಾಡಿಕೊಡುವುದಾಗಿ ಯುವತಿಯನ್ನು ಪುಸಲಾಯಿಷಿ ಮನೆಗೆ ಕರೆಯಿಸಿದ್ದಾರೆ. ಬಳಿಕ ಯುವತಿಯ ಪೋಷಕರು, ಮಂಜುನಾಥನ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಜುನಾಥ್ 20 ದಿನಗಳ ಹಿಂದೆ ನಾಯಕನಹಟ್ಟಿಯ ಹೊಸಗುಡ್ಡ ದೇವಸ್ಥಾನದಲ್ಲಿ ಯುವತಿಯೊಂದಿಗೆ ಮದುವೆಯಾಗಿದ್ದ.
ಈ ಬೆಳವಣಿಗೆಯಿಂದ ಬೆಚ್ಚಿಬಿದ್ದ ಯುವತಿಯ ಮನೆಯವರು ಆತನನ್ನು ಕೊಲ್ಲಲು ಯೋಜನೆ ರೂಪಿಸಿದ್ದು, ಮಗಳು ಹಾಗೂ ಮಂಜುನಾಥ್ ಅವರಿಗೆ ಎಲ್ಲರ ಸಮ್ಮುಖದಲ್ಲೇ ಮದುವೆ ಮಾಡಿಕೊಡುವುದಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.
ಮಹಿಳೆಯನ್ನು ವಾಪಸ್ ಮನೆಗೆ ಕರೆದೊಯ್ದಿದ್ದು, ಬುಧವಾರ ಮಂಜುನಾಥ್ ಅವರ ನಿವಾಸಕ್ಕೆ ಆಗಮಿಸಿದಾಗ ಪತ್ನಿಯ ಕುಟುಂಬಸ್ಥರು ದೊಣ್ಣೆ, ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.
ಮಂಜುನಾಥ್ ಸಾವಿನ ನಂತರ ಯುವತಿ ಪತಿಯ ಜತೆ ನಡೆಸಿದ ಸಂಭಾಷಣೆಯ ಆಡಿಯೋ ಕ್ಲಿಪ್ ಹೊರಬಿದ್ದಿದ್ದು, ತನ್ನ ನಿವಾಸಕ್ಕೆ ಬಂದು ತನ್ನನ್ನು ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾಳೆ. ಹೀಗಾಗಿ ಮಂಜುನಾಥ್ ಪತ್ನಿಯನ್ನು ಕರೆದುಕೊಂಡು ಹೋಗಲು ಒಪ್ಪುತ್ತಾನೆ. ಕೊನೆಗೂ ನಿನ್ನೆ ಸಂಜೆ ವೇಳೆ ಮಂಜುನಾಥ್ ಊರಿಗೆ ಬಂದಿದ್ದು, ಈ ವಿಚಾರ ತಿಳಿದ ಯುವತಿ ಪೋಷಕರು ಮನೆಗೆ ನುಗ್ಗಿ ಮಂಜುನಾಥನ ಮೇಲೆ ಆಯುಧಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Advertisement