ಬೆಂಗಳೂರು: ಬೆಳಗಾವಿಯಲ್ಲಿ ಡಿಸೆಂಬರ್ 9ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ, ಕಾರ್ಮಿಕ ಕಲ್ಯಾಣ ನಿಧಿಯನ್ನು ಹೆಚ್ಚಿಸುವ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಮಸೂದೆಗಳಿಗೆ ಗುರುವಾರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು, ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ಮಸೂದೆ ಅಂಗೀಕಾರಗೊಂಡ ನಂತರ ಕಾರ್ಮಿಕರ ಪಾಲು 50 ರೂ., ಉದ್ಯೋಗದಾತರ ಪಾಲು 100 ರೂ. ಮತ್ತು ಸರ್ಕಾರದ ಪಾಲು 50 ರೂ ಆಗುತ್ತದೆ ಎಂದು ಎಂದರು.
ಪ್ರಸ್ತುತ ಕಾರ್ಮಿಕರ ಕೊಡುಗೆ 20 ರೂ., ಮಾಲೀಕರು 40 ರೂ. ಮತ್ತು ರಾಜ್ಯ ಸರ್ಕಾರ ಪಾಲು 20 ರೂ. ಇದೆ. ಇದನ್ನು ಹೆಚ್ಚಿಸಲಾಗಿದ್ದು, ಹೆಚ್ಚಳದ ಮೊತ್ತ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಗೆ ಹೋಗುತ್ತದೆ. ಇದು ಕಾರ್ಪಸ್ ಅನ್ನು ದೊಡ್ಡದಾಗಿಸಲು ಸಾಧ್ಯವಾಗುತ್ತದೆ ಎಂದು ಪಾಟೀಲ್ ಹೇಳಿದರು.
ಈಗ ಕಾರ್ಪಸ್ ಫಂಡ್ ವಾರ್ಷಿಕವಾಗಿ 80 ಕೋಟಿ ರೂ.ಸಂಗ್ರಹವಾಗುತ್ತಿದ್ದು, ಇನ್ನುಮುಂದೆ ವಾರ್ಷಿಕ 200 ಕೋಟಿ ರೂ.ಗೆ ಹೆಚ್ಚಾಗಲಿದೆ ಎಂದರು.
ಇನ್ನು ಕರ್ನಾಟಕ ಅಂತರ್ಜಲ ನಿಯಮಾವಳಿ ಮತ್ತು ಅಭಿವೃದ್ಧಿ ನಿಯಂತ್ರಣ ಮತ್ತು ನಿರ್ವಹಣೆ ತಿದ್ದುಪಡಿ ವಿಧೇಯಕಕ್ಕೂ ಇಂದು ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಮಸೂದೆಯು ತೆರೆದ ಬೋರ್‌ವೆಲ್‌ಗಳ ಮೇಲೆ ನಿಗಾ ಇಡುವ ಗುರಿಯನ್ನು ಹೊಂದಿದೆ. ಕೊಳವೆಬಾವಿ ನಿಷ್ಕ್ರಿಯ ಆಗಿದ್ದರೆ ಮುಚ್ಚುವುದು ಕಡ್ಡಾಯ. ಶಿಕ್ಷೆ ಹಾಗೂ ದಂಡ ವಿಧಿಸಲು ವಿಧೇಯಕದಲ್ಲಿ ಅವಕಾಶವಿದೆ ಎಂದರು.
ಇಂದು ಸಚಿವ ಸಂಪುಟ ಒಪ್ಪಿಗೆ ಪಡೆದ ಮತ್ತೊಂದು ಪ್ರಮುಖ ಮಸೂದೆ ಎಂದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ತಿದ್ದುಪಡಿ ವಿಧೇಯಕ. ಇಷ್ಟು ದಿನ ರಾಜ್ಯಪಾಲರು ಚಾನ್ಸಲರ್ ಆಗಿದ್ದರು. ಇನ್ಮುಂದೆ ಮುಖ್ಯಮಂತ್ರಿ ಚಾನ್ಸಲರ್ ಆಗಲಿದ್ದಾರೆ. ಆ ಮೂಲಕ ರಾಜ್ಯಪಾಲರ ಬಳಿ ಇದ್ದ ಅಧಿಕಾರವನ್ನು ಹಿಂಪಡೆದು ಸಿಎಂಗೆ ನೀಡಲಾಗಿದೆ.
ಇಲ್ಲಿಯವರೆಗೆ ರಾಜ್ಯಪಾಲರು ಕುಲಪತಿಯಾಗಿದ್ದರು. ಆದರೆ ಈ ತಿದ್ದುಪಡಿಯೊಂದಿಗೆ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿಯಾಗಲಿದ್ದಾರೆ ಎಂದು ಪಾಟೀಲ್ ಹೇಳಿದರು.
Advertisement