ಎನ್‌ಐಎ ಮತ್ತು ಸಿಬಿಐ ನಡೆಸಿದ ಕಾರ್ಯಾಚರಣೆಯಲ್ಲಿ ಇಂಟರ್‌ಪೋಲ್ ರೆಡ್ ನೋಟಿಸ್ ಎದುರಿಸುತ್ತಿರುವ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್‌ಇಟಿ) ಸದಸ್ಯನನ್ನು ರುವಾಂಡಾ ಗುರುವಾರ ಭಾರತಕ್ಕೆ ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತರಾಷ್ಟ್ರೀಯವಾಗಿ ನಿಷೇಧಕ್ಕೆ ಒಳಗಾದ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿರುವ ಸಲ್ಮಾನ್ ರೆಹಮಾನ್ ಖಾನ್, ಬೆಂಗಳೂರಿನಲ್ಲಿ ಮತ್ತಷ್ಟು ಭಯೋತ್ಪಾದಕ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಫೋಟಕಗಳನ್ನು ಒದಗಿಸುವಲ್ಲಿ ಸಹಾಯ ಮಾಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2023 ರಲ್ಲಿ ರೆಹಮಾನ್ ವಿರುದ್ಧ ಬೆಂಗಳೂರಿನಲ್ಲಿ ಭಯೋತ್ಪಾದನೆಯನ್ನು ಹರಡಲು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಿದೆ ಎಂದು ವಕ್ತಾರರು ಹೇಳಿದ್ದಾರೆ. ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.
ವಕ್ಫ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರ ಒಂದು ತಂಡ ನಡೆಸುತ್ತಿರುವ ಹೋರಾಟಕ್ಕಿಂತ ಪಕ್ಷದ ನಾಯಕರ ನಡುವಿನ ಭಿನ್ನಮತವೇ ಹೆಚ್ಚು ಸದ್ದು ಮಾಡುತ್ತಿದೆ, ಈ ಬಗ್ಗೆ ಹೈಕಮಾಂಡ್ ಗೆ ಎರಡು ಬಾರಿ ಪತ್ರ ಬರೆದರೂ ಅವರು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮಾಜಿ ಸಿಎಂ ಸದಾನಂದ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆಗಳು ನಡೆದಿವೆ, ಚುನಾವಣೆಗಳು ದೊಡ್ಡ ಸವಾಲಾಗಿರುವುದರಿಂದ, ಚುನಾವಣೆಗಳಿಲ್ಲದ ರಾಜ್ಯಗಳಲ್ಲಿ ಪಕ್ಷದ ಸಮಸ್ಯೆಗಳನ್ನು ಬದಿಗಿಡುವುದು ಸಹಜ. ಹಾಗಾಗಿ ಸ್ವಲ್ಪ ವಿಳಂಬವಾಗಬಹುದು, ಆದರೆ ಇನ್ನೂ ಮುಂದಾದರೂ ಪಕ್ಷದೊಳಗಿನ ಗುಂಪುಗಾರಿಕೆ ಬಗ್ಗೆ ಹೈಕಮಾಂಡ್ ಮೌನ ಮುರಿಯಬೇಕು ಕೇಂದ್ರ ನಾಯಕರು ಮಧ್ಯಪ್ರವೇಶಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸದಾನಂದ ಗೌಡ ಒತ್ತಾಯಿಸಿದ್ದಾರೆ. ಸದಾನಂದ ಗೌಡ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಸನಗೌಡ ಪಾಟೀಲ್ ಯತ್ನಾಳ್, ಸದಾನಂದ ಗೌಡ ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲ ಬಂಡವಾಳ ಬಯಲು ಮಾಡುವೆ ಎಂದು ಎಚ್ಚರಿಕೆ ನೀಡಿದ್ದಾರೆ. ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಸದಾನಂದ ಗೌಡರು ಮಾತನಾಡಿರೋದನ್ನೆಲ್ಲ ಬಿಚ್ಚಿಡುತ್ತೇನೆ. ನನಗಿಂತ ಕೆಟ್ಟದಾಗಿ ಸದಾನಂದಗೌಡ ಮಾತನಾಡಿದ್ದಾರೆ. ನಾನು ವಕ್ಫ್ ವಿರುದ್ಧ ಮಾತನಾಡಿದ್ದೇನೆ ಸದಾನಂದ ಗೌಡ ಯಾಕೆ ಗಾಬರಿಯಾಗಬೇಕು ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಸಮಸ್ಯೆಯುಂಟಾದ ಪರಿಣಾಮ ಆರೋಗ್ಯ ಸೇವೆಯಲ್ಲಿ ತೀವ್ರ ವ್ಯತ್ಯಯವಾಗಿದೆ. ಪರಿಣಾಮ ತುರ್ತು ಪ್ರಕರಣ ಹೊರತುಪಡಿಸಿ ಇತರೆ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿದೆ. 4-5 ದಿನಗಳಿಂದ ವಿದ್ಯುತ್ ಏರಿಳಿತವಾಗಿದ್ದು, ಇದರ ಪರಿಣಾಮ ಹವಾನಿಯಂತ್ರಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಸಮಸ್ಯೆ ಉದ್ಭವಿಸಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. "ಆಸ್ಪತ್ರೆಯ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಹವಾನಿಯಂತ್ರಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನಃಸ್ಥಾಪಸಲಿದ್ದಾರೆ ಎಂದು ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ.ದಿವ್ಯಪ್ರಕಾಶ್ ತಿಳಿಸಿದ್ದಾರೆ.ಲೋಕಾಯುಕ್ತ ವಿಚಾರಣೆ ಎದುರಿಸಿದ ಮಾಜಿ ಆಯುಕ್ತ ಪಿ ಎಸ್ ಕಾಂತರಾಜು
ಲೋಕಾಯುಕ್ತ ಪೊಲೀಸರು ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಮಾಜಿ ಆಯುಕ್ತ ಪಿ ಎಸ್ ಕಾಂತರಾಜು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಲೋಕಾಯುಕ್ತ ಪೊಲೀಸ್ ಕಚೇರಿಯಿಂದ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಡಾ ಮಾಜಿ ಆಯುಕ್ತ ಕಾಂತರಾಜು ಅವರು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ತನಿಖಾ ಅಧಿಕಾರಿಗೆ(ಐಒ) ತಿಳಿಸಿದ್ದೇನೆ ಎಂದರು. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಬಿಎಂ, ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಮತ್ತು ಇತರರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರು ಸ್ಫೊಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಆಡಿಯೋ ಸಂದೇಶ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬ ತನ್ನ ಕಾರನ್ನು ಸ್ಫೋಟಿಸುವುದಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಮೂಲಕ ಆಡಿಯೋ ಸಂದೇಶ ರವಾನಿಸಿದ್ದಾನೆ ಎಂದು ಆರ್.ಅನಿತಾ ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನನಗೆ ವೈಯಕ್ತಿಕವಾಗಿ ಇದುವರೆಗೆ ಅಂತಹ ಯಾವುದೇ ಸಂದೇಶ ಬಂದಿಲ್ಲ, ಆದ್ದರಿಂದ ನಾನು ಯಾವುದೇ ಪೊಲೀಸ್ ದೂರು ನೀಡುವುದಿಲ್ಲ, ಬೆದರಿಕೆಯ ನಂತರ, ತಾನು ಈಗ ಇನ್ನೂ ಹೆಚ್ಚು ಜಾಗರೂಕರಾಗಿರುತ್ತೇನೆ ಎಂದು ಅನಿತಾ ತಿಳಿಸಿದ್ದಾರೆ.
Advertisement