ಬೆಂಗಳೂರು: ಸ್ವಾಮೀಜಿಗಳು ರಾಜಕಾರಣದಿಂದ ದೂರ ಇರಬೇಕು. ವಿವಾದಾತ್ಮಕ ಹೇಳಿಕೆ ಕೊಟ್ಟು ದೇಶದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಮುಸ್ಲಿಮರಿಗೆ ನೀಡಿರುವ ಮತದಾನದ ಹಕ್ಕು ಹಿಂಪಡೆಯಬೇಕು ಎಂಬ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರ ಶೇಖರ ಸ್ವಾಮೀಜಿ ಹೇಳಿಕೆಗೆ ಬುಧವಾರ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, 'ಸ್ವಾಮೀಜಿಗಳು ಇಂಥ ವಿವಾದಾತ್ಮಕ ಹೇಳಿಕೆ ನೀಡಬಾರದು. ಅವರು ಧಾರ್ಮಿಕ ಕೆಲಸಗಳ ಬಗ್ಗೆ ಗಮನ ಹರಿಸಬೇಕು. ಸಮಾಜದ ಶಾಂತಿ ಕೆಡಿಸುವ ಕೆಲಸ ಮಾಡಬಾರದು. ಅವರು ರಾಜಕಾರಣದಿಂದ ದೂರ ಇರುವುದು ಒಳಿತು. ಮತದಾನ ಎಂಬುದು ಸಂವಿಧಾನದ ಮೂಲಕ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಬಂದಿರುವ ಹಕ್ಕು. ಒಬ್ಬ ವ್ಯಕ್ತಿ ಜನಿಸಿದರೆ ಸಂವಿಧಾನದಿಂದ ಸಿಗುವ ಹಕ್ಕುಗಳಲ್ಲಿ ಇದು ಕೂಡ ಒಂದು' ಎಂದರು.
ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಮತ್ತು ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು' ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ನೀಡಿದ್ದರು.
Advertisement