ಬೆಂಗಳೂರು: ಐಟಿ ಸಿಟಿ ಬೆಂಗಳೂರಿನ ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿರುವ 830 ಅಪಾರ್ಟ್‌ಮೆಂಟ್‌ಗಳ ವಸತಿ ಸಮುಚ್ಚಯದಲ್ಲಿ ಕಳೆದ ಐದು ದಿನಗಳಿಂದ ಅನೇಕ ನಿವಾಸಿಗಳು ನಿಗೂಢ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬ್ರಿಗೇಡ್ ಮೆಡೋಸ್ ಪ್ಲುಮೆರಿಯಾ ಅಪಾರ್ಟ್ ಮೆಂಟಿನ ಚಿಕ್ಕ ಮಕ್ಕಳು ಮತ್ತು ಹಿರಿಯ ನಾಗರಿಕರು ಕಾಯಿಲೆಯಿಂದ ಬಳಲುತ್ತಿದ್ದಾರೆ.
262 ಕುಟುಂಬಗಳನ್ನು ಒಳಗೊಂಡ ಕನಿಷ್ಠ 500 ನಿವಾಸಿಗಳು ವಾಂತಿ, ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಅಪಾರ್ಟ್‌ಮೆಂಟ್ ಸಂಕೀರ್ಣದೊಳಗೆ ಸ್ವಂತ ಬೋರ್ ಇದೆ, ಅದರ ನೀರನ್ನು ನಿವಾಸಿಗಳು ಬಳಕೆ ಮಾಡುತ್ತಿದ್ದಾರೆ.
ರೋಗಿಗಳಿಗೆ ಚಿಕಿತ್ಸೆ ನೀಡಿದ ಸ್ಥಳೀಯ ವೈದ್ಯರು ಇದನ್ನು ಗ್ಯಾಸ್ಟ್ರೋಎಂಟರೈಟಿಸ್ ಎಂದು ಹೇಳುತ್ತಾರೆ. ಪರೀಕ್ಷಿಸಿದ ನೀರಿನ ಮಾದರಿಗಳಿಗೆ ವಿವಿಧ ಪ್ರಯೋಗಾಲಯಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿರುವುದರಿಂದ ನಿಖರವಾದ ಕಾರಣವನ್ನು ಇನ್ನೂ ತಿಳಿದುಬಂದಿಲ್ಲ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡಿದ ನಿವಾಸಿಯೊಬ್ಬರು, “ಭಾನುವಾರ ರಾತ್ರಿ ನನ್ನ ವಯಸ್ಸಾದ ತಂದೆ, ಪತ್ನಿ, ಮಕ್ಕಳು ಮತ್ತು ನಾನು ಅನಾರೋಗ್ಯಕ್ಕೆ ತುತ್ತಾದೆವು. ಏನಾಗುತ್ತಿದೆ ಎಂದು ಗೊತ್ತೇ ಆಗಲಿಲ್ಲ. ಪತ್ನಿ ಕೆಲಸಕ್ಕೆ ಹೋಗಲಿಲ್ಲ, ಮಕ್ಕಳು ಮನೆಯಲ್ಲಿಯೇ ಇರಬೇಕಾಯಿತು. ನಾನು ಮನೆಯಿಂದ ಕೆಲಸ ಮಾಡುವುದರಿಂದ, ಇಂದು ಕೆಲಸ ಮಾಡಲು ಪ್ರಾರಂಭಿಸಿದೆ. ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳು ಮನೆಯ ಎಲ್ಲರಿಗೂ ಆಗಿದೆ ಎಂದರು.
ಮತ್ತೊಬ್ಬ ನಿವಾಸಿ ನೀರಿನ ಮಾದರಿಗಳನ್ನು ಎರಡು ಖಾಸಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಎಸ್‌ಎಲ್‌ಎನ್ ಟೆಸ್ಟಿಂಗ್ ಲ್ಯಾಬ್‌ನ ವರದಿಯು ನೀರಿನ ಮಾಲಿನ್ಯವನ್ನು ತಳ್ಳಿಹಾಕುತ್ತದೆ ಆದರೆ ರೋಬಸ್ಟ್ ಮೆಟೀರಿಯಲ್ಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‌ನ ವರದಿಯು ಕೋಲಿಫಾರ್ಮ್ ಬ್ಯಾಕ್ಟೀರಿಯಾ (ಮಲ ಮಾಲಿನ್ಯ) ಮತ್ತು ಇ.ಕೋಲಿ (ಮಾನವ ಅಥವಾ ಪ್ರಾಣಿಗಳ ತ್ಯಾಜ್ಯದಿಂದ ಮಾಲಿನ್ಯ) ಇರುವಿಕೆಯನ್ನು ಸೂಚಿಸುತ್ತದೆ.
ಮತ್ತೊಂದೆಡೆ, ಸರ್ಕಾರಿ ಲ್ಯಾಬ್‌ಗೆ ಕಳುಹಿಸಲಾದ ವರದಿಯಲ್ಲಿ ಆರು ಟ್ಯಾಂಕ್‌ಗಳಲ್ಲಿ ಐದರಲ್ಲಿ ನೀರು ಉತ್ತಮವಾಗಿದೆ ಎಂದು ತಿಳಿದುಬಂದಿದೆ. ಒಂದು ಬ್ಲಾಕ್ ನ್ನು ಮಾತ್ರ ಪೂರೈಸುವ ಒಂದು ಟ್ಯಾಂಕ್ E.coli ನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಟ್ಯಾಂಕ್‌ನಿಂದ ನೀರು ಸರಬರಾಜು ನಿಲ್ಲಿಸಿ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಎಂದರು.
ಮತ್ತೊಬ್ಬ ನಿವಾಸಿ ಇದು ತುಂಬಾ ದುಬಾರಿ ಅಪಾರ್ಟ್ಮೆಂಟ್ ಆಗಿದ್ದರೂ ಇಲ್ಲಿ ಹೀಗಾಗಿರುವುದು ಹೊರಗೆ ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಾಧಾ TNIE ಸಿಬ್ಬಂದಿ ಜೊತೆ ಮಾತನಾಡಿ “ನಮ್ಮ ಸಿಬ್ಬಂದಿ ಜಿಲ್ಲಾ ಕಣ್ಗಾವಲು ಅಧಿಕಾರಿ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಯೊಂದಿಗೆ ಅಪಾರ್ಟ್ ಮೆಂಟ್ ಗೆ ಭೇಟಿ ನೀಡಿದ್ದಾರೆ. ಇದು ಗ್ಯಾಸ್ಟ್ರೋಎಂಟರೈಟಿಸ್ನ ಸೌಮ್ಯವಾದ ಪ್ರಕರಣವೆಂದು ತೋರುತ್ತದೆ. ನಾವು ನಿವಾಸಿಗಳಿಗೆ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿದ್ದೇವೆ ಎಂದರು.
ಸೇಂಟ್ ಜಾನ್ಸ್ ಆಸ್ಪತ್ರೆಯ ಹೆಚ್ಚುವರಿ ಅಧೀಕ್ಷಕಿ ಡಾ.ಆರ್.ಜಯಶ್ರೀ, ನವೆಂಬರ್ 23 ರಿಂದ ನಿವಾಸಿಗಳು ಸಮಸ್ಯೆ ಹೇಳಿಕೊಂಡು ಬರುತ್ತಿದ್ದಾರೆ. ನಾನು ಅವರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡುತ್ತಿದ್ದೇನೆ. ನಿನ್ನೆ ಮತ್ತು ಇಂದು ಭೇಟಿ ನೀಡಿದವರು ಗುಣಮುಖರಾಗುತ್ತಿದ್ದಾರೆ. ಸಮಸ್ಯೆ ಏನೆಂದು ನಿಖರವಾಗಿ ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು.
Advertisement