ಬೆಂಗಳೂರು: ಗೆಜೆಟೆಡ್ ಪ್ರೊಬೆಷನರಿ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಮರುಪರೀಕ್ಷೆಯನ್ನು ಡಿಸೆಂಬರ್ 29ಕ್ಕೆ ನಿಗದಿ ಮಾಡಿ, ಕರ್ನಾಟಕ ಲೋಕಸೇವಾ ಆಯೋಗ ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ಡಿಸೆಂಬರ್ 29 ರಂದು ಇತರ ಯಾವುದೇ ಪರೀಕ್ಷೆ ನಿಗದಿಯಾಗಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೇ ಮರುಪರೀಕ್ಷೆಗೆ ಆ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇತರ ಯಾವುದೇ ಪರೀಕ್ಷೆಗಳನ್ನು ಡಿ.29ಕ್ಕೆ ನಿಗದಿ ಮಾಡಿದರೆ, ಅದಕ್ಕೆ ಆಯೋಗ ಹೊಣೆಯಾಗುವುದಿಲ್ಲ. ಯಾವುದೇ ಕಾರಣಕ್ಕೂ ಪರೀಕ್ಷೆ ಮುಂದೂಡುವುದಿಲ್ಲ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಿರುವ ಎಲ್ಲ ಅಭ್ಯರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು KPSC ಕಾರ್ಯದರ್ಶಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಫೋಸ್ಟ್ ಮಾಡಲಾಗಿದೆ.
384 ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗಾಗಿ ಆಗಸ್ಟ್ ನಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಭಾಷಾಂತರದ ಎಡವಟ್ಟು ವ್ಯಾಪಕ ಟೀಕೆ ಹಾಗೂ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ಮರು ಪರೀಕ್ಷೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಎಸ್ ಸಿಗೆ ಸೂಚಿಸಿದ್ದರು.
Advertisement