ಮುಡಾ ಸೈಟ್ ಪ್ರಕರಣದಲ್ಲಿ ತಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದು ಯಾವ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಮುಡಾ ಪರಿಹಾರದ ಸೈಟ್‌ಗಳನ್ನು ನೀಡಿದ್ದರಿಂದ ಅದು ಮನಿ ಲಾಂಡ್ರಿಂಗ್ ಕೇಸು ಆಗುವುದಿಲ್ಲ ಎಂದರು. ಮುಡಾದಿಂದ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ದಾಖಲಿಸಿರುವ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ಜಾರಿ ಪ್ರಕರಣದ ಮಾಹಿತಿ ವರದಿ ದಾಖಲಿಸಿತ್ತು. ನಿನ್ನೆ ಮುಡಾ ತಮಗೆ ಮಂಜೂರು ಮಾಡಿರುವ 14 ನಿವೇಶಗಳನ್ನು ಹಿಂದಿರುಗಿಸುವುದಾಗಿ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಇಂದು ಖುದ್ಧು ಮೈಸೂರಿನ ಸಬ್ ರಿಜಿಸ್ಟರ್ ಕಚೇರಿಗೆ ತೆರಳಿ ತಮಗೆ ನೀಡಿದ್ದ 14 ನಿವೇಶನಗಳ ಖಾತೆಯನ್ನು ರದ್ದು ಪಡಿಸಿದ್ದಾರೆ.
ಮುಡಾ ನಿವೇಶನ ಹಂಚಿಕೆ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದ ಮೈಸೂರು ಲೋಕಾಯುಕ್ತ ಪೊಲೀಸರು ಇಂದು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ದೂರುದಾರ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಕರೆತಂದು ಕೆಸರೆ ಗ್ರಾಮದ ಸರ್ವೆ ನಂಬರ್ 464ರ ವಿವಾದಿತ ಜಮೀನನ್ನು ಪರಿಶೀಲಿಸಿದರು. ಮುಡಾ ನಿವೇಶನ ಹಂಚಿಕೆಯಲ್ಲಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಹೆಸರಿಗೆ ವರ್ಗಾವಣೆಯಾದ ನಿವೇಶನ ವ್ಯವಹಾರದಲ್ಲಿ ಅಕ್ರಮವಾಗಿದೆಯೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಿ, ಮುಖ್ಯಮಂತ್ರಿಯಾಗಲು ಸಾವಿರ ಕೋಟಿ ಹಣ ಇಟ್ಟುಕೊಂಡು ಕೆಲವರು ಕಾಯುತ್ತಿದ್ದಾರೆಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ದೂರು ದಾಖಲಿಸಿದೆ. 1,000 ಕೋಟಿ ರೂ. ಹಣದ ಮೂಲ ಯಾವುದು? ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. PMLA ಅಡಿ ಪ್ರಕರಣ ಬರುತ್ತದೆ. ವಿಚಾರಣೆಗೊಳಪಡಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೆ.29ರಂದು ದಾವಣಗೆರೆಯಲ್ಲಿ ಯತ್ನಾಳ್ ಈ ಹೇಳಿಕೆ ನೀಡಿದ್ದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ನಡುವಿನ ಸಮರ ತಾರಕಕ್ಕೇರಿದೆ. ಚಂದ್ರಶೇಖರ್ ಬರೆದಿದ್ದ ಪತ್ರ ಜೆಡಿಎಸ್ ನಾಯಕರನ್ನ ಕೆರಳಿಸಿದ್ದು, ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ. ಈ ಮಧ್ಯೆ ವಿವಾದಾತ್ಮಕ ಪದ ಬಳಕೆ ವಿಚಾರವಾಗಿ ಚಂದ್ರಶೇಖರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಎಡಿಜಿಪಿ ಚಂದಶೇಖರ್ ಪರೋಕ್ಷವಾಗಿ ಕುಮಾರಸ್ವಾಮಿ ಅವರನ್ನು ಹಂದಿಗೆ ಹೋಲಿಸಿ ತಮ್ಮ ಸಿಬ್ಬಂದಿ, ಅಧಿಕಾರಿ ವರ್ಗಕ್ಕೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದರು. ಈ ವಿಚಾರವಾಗಿ ಅಮಿತ್ ಶಾಗೆ ಪತ್ರ ಬರೆದಿರುವ ಕುಮಾರಸ್ವಾಮಿ ಐಪಿಎಸ್ ಅಧಿಕಾರಿಯಾಗಿ ಚಂದ್ರಶೇಖರ್ ಸೇವಾ ನಿಯಮ ಉಲ್ಲಂಘಿಸಿದ್ದಾರೆಯೇ ಎಂದು ಪರಿಶೀಲಿಸಬೇಕು. ಚಂದ್ರಶೇಖರ್ ವಂಚನೆಗಳ ಬಗ್ಗೆ ಸ್ವತಂತ್ರ ಇಲಾಖಾ ತನಿಖೆ ನಡೆಸಬೇಕು. ಕರ್ನಾಟಕ ಕೇಡರ್ ಅಲ್ಲದಿದ್ದರೂ ಇಲ್ಲಿ ಇರಲು ನಿಯಮ ಉಲ್ಲಂಘಿಸಿದ್ದಾರೆಯೇ ಎಂದು ಕೂಡ ಪರಿಶೀಲಿಸಬೇಕಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬಾಗಲಕೋಟೆಯ ರಾಮಾರೂಢ ಮಠದ ಪರಮರಾಮಾರೂಢ ಸ್ವಾಮೀಜಿಗೆ 1 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಜೆಡಿಎಸ್ ಮುಖಂಡನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ವಂಚನೆ ಪ್ರಕರಣ ಸಂಬಂಧ ಸ್ವಾಮೀಜಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕಾಶ್ ಮುಧೋಳ ನನ್ನು ಬಂಧಿಸಲಾಗಿದ್ದು ಇನ್ನೂ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ. 2024ರಲ್ಲಿ ರಾಮದುರ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಕಾಶ್ ಮುಧೋಳ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಪ್ರಕಾಶ್ ವಿರುದ್ಧ ಈಗಾಗಲೇ ಕಳ್ಳತನ, ವಂಚನೆ ಮತ್ತು ಸುಲಿಗೆ ಸೇರಿದಂತೆ 12 ಪ್ರಕರಣಗಳು ದಾಖಲಾಗಿವೆ.
ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುವ ಉಪಚುನಾವಣೆಗೆ ಸವಿತಾ ಸಮಾಜದ ಕಿಶೋರ್ ಕುಮಾರ್ ಪುತ್ತೂರು ಉಮೇದುವಾರಿಕೆಯನ್ನು ಬಿಜೆಪಿ ಮಂಗಳವಾರ ಪ್ರಕಟಿಸಿದೆ. ಮಾಜಿ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿತ್ತು. ಅಕ್ಟೋಬರ್ 21 ರಂದು ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 24 ರಂದು ಮತ ಎಣಿಕೆ ನಡೆಯಲಿದೆ.
Advertisement