ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮದ ಇಬ್ಬರು ಬಾಲಕಿಯರು ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟ ದಾರುಣ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ಬಾಲಕಿಯರನ್ನು ಗಂಗೋತ್ರಿ (10) ಹಾಗೂ ತನುಶ್ರೀ(11) ಎಂದು ಗುರುತಿಸಲಾಗಿದೆ. ಇಬ್ಬರೂ ಕೃಷಿ ಹೊಂಡದ ಬಳಿ ಆಟವಾಡುತ್ತಿದ್ದ ವೇಳೆ ಓರ್ವ ಬಾಲಕಿ ಕಾಲು ಜಾರಿ ಬಿದ್ದಿದ್ದಾಳೆ. ತಕ್ಷಣ ಮತ್ತೋರ್ವ ಬಾಲಕಿ ಕಾಪಾಡಲು ಹೋಗಿದ್ದು, ಇಬ್ಬರೂ ನೀರು ಪಾಲಾಗಿದ್ದಾರೆ.
ನಾಲ್ವರು ವಿದ್ಯಾರ್ಥಿನಿಯರು ಶಾಲೆ ಬಿಟ್ಟ ಬಳಿಕ ಎಂದಿನಂತೆ ಮನೆಗೆ ತೆರಳುತ್ತಿದ್ದರು. ರಸ್ತೆ ಮಾರ್ಗದಲ್ಲಿ ಕೃಷಿ ಹೊಂಡ ನೋಡಿದ್ದಾರೆ. ಈ ಹೊಂಡದ ಬಳಿ ಆಟವಾಡುತ್ತಾ ಬರುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕಿಯರ ಜೊತೆ ಖುಷಿ ಎಂಬ ಬಾಲಕಿಯೂ ಹೊಂಡದಲ್ಲಿ ಬಿದ್ದಿದ್ದು, ಆಕೆಯನ್ನು ಜಮೀನಿನ ಮಾಲೀಕನ ಮಗ ಕಾಪಾಡಿದ್ದಾನೆ. ಇವರೊಂದಿಗಿದ್ದ ಶೈಲಜಾ ಎಂಬ ಬಾಲಕಿ ಗಾಬರಿಯಿಂದ ಮನೆಗೆ ತೆರಳಿದ್ದಾಳೆ. ಮೃತಪಟ್ಟ ಬಾಲಕಿಯರ ಪೋಷಕರು ಕೂಲಿ ಕೆಲಸಕ್ಕೆ ಮಲೆನಾಡಿಗೆ ಹೋಗಿದ್ದಾರೆ. ಅಜ್ಜಿಯ ಜೊತೆಗಿದ್ದು, ಶಾಲೆಗೆ ಹೋಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಿಳಿಚೋಡು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement