
ಕೋಲಾರ: ವಿವಾದಕ್ಕೆ ಕಾರಣವಾಗಿರುವ 14 ನಿವೇಶನಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಬಿಎಂ ಅವರ ಹೆಸರಿನಲ್ಲಿಯೇ ಇದ್ದ ಕಾರಣ ಮುಡಾ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರವನ್ನು ಅವರೇ ತೆಗೆದುಕೊಂಡಿದ್ದಾರೆ ಎಂದು ಸಿಎಂ ಆಪ್ತ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. .
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನ್ಯಾಯಾಲಯ ಸಿದ್ದರಾಮಯ್ಯನವರಿಗೆ ಹೇಳಿಲ್ಲ, ಮುಡಾ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ತೀರ್ಮಾನ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದರು. ಮುಖ್ಯಮಂತ್ರಿಯವರ ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಮುಡಾ ನಿವೇಶನ ಹಂಚಿಕೆ ಅವ್ಯವಹಾರದಲ್ಲಿ ಸಿದ್ದರಾಮಯ್ಯ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಹಿಟ್ ಅಂಡ್ ರನ್ ರಾಜಕಾರಣಿ ಎಂದು ಹೇಳಿಕೆ ನೀಡಿದ್ದ ಕೇಂದ್ರ ಉಕ್ಕು ಸಚಿವ ಕುಮಾರಸ್ವಾಮಿ, ಮುಡಾ ನಿವೇಶನ ವಾಪಸ್ ನೀಡಿದ ನಂತರ ಸಿಎಂ ಅವರನ್ನು ಯೂ ಟರ್ನ್ ರಾಜಕಾರಣಿ ಎಂದಿದ್ದಾರೆ. ಈ ಎರಡು ಹೇಳಿಕೆಗಳಿಗೂ ಸಂಬಂಧವಿಲ್ಲ , ಕುಮಾರಸ್ವಾಮಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಮತ್ತು ಜೆಡಿಎಸ್‌ನಿಂದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ ನಡೆಸುತ್ತಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಈ ಸಂಬಂಧ ತನಿಖೆಯಾಗಬೇಕು ಎಂದು ಹೇಳಿದರು. ಕಳೆದ ವಾರ ನಡೆದ ಸಭೆಯಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಎರಡು ವಿಭಾಗಗಳ ಕಾರ್ಯಕರ್ತರು ಹೊಡೆದಾಡಿಕೊಂಡ ಘಟನೆ ಬಗ್ಗೆ ತಮಗೆ ಸರಿಯಾದ ಮಾಹಿತಿಯಿಲ್ಲ ಆ ಸಮಯದಲ್ಲಿ ನಾನು ಈರಿನಲ್ಲಿರಲಿಲ್ಲ, ಈ ಸಂಬಂಧ ಮಾಹಿತಿ ಪಡೆದಿದ್ದೇನೆ ಎಂದರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದು, ಸಮಸ್ಯೆಗಳ ಪರಿಹಾರಕ್ಕೆ ಶೀಘ್ರವೇ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Advertisement