ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಇಂದು ಬೆಳಗ್ಗೆ 9.15 ರಿಂದ 9.40ರ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಜಕೀಯದಲ್ಲಿ ಸೋತ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು 5 ವರ್ಷಗಳ ನಂತರ ಅವಕಾಶವಿದೆ. ಪ್ರತಿಪಕ್ಷಗಳು ಸರ್ಕಾರ ಉರುಳಿಸುವ ಕೆಲಸಕ್ಕೆ ಮುಂದಾಗಬಾರದು ಎಂದು ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪರೋಕ್ಷವಾಗಿ ಹೇಳಿದರು. ಅಲ್ಲದೆ ಯುವಜನತೆ ಮೋದಿ ಮೋದಿ ಎಂದು ಮುಂದುವರಿಯುತ್ತಿದ್ದಾರೆ. ಹಾಗೆಂದು ಸರ್ಕಾರ ಅಸ್ಥಿರಗೊಳಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹೇಳಿದರು.
ಮೈಸೂರು ದಸರಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಏಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದರು. ಹಾಗಾದರೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರಾ? ಎಂದು ಜೆಡಿಎಸ್ ನಾಯಕರ ವಿರುದ್ದವೇ ಹರಿಹಾಯ್ದರು. ಈಗ ಎಲ್ಲರೂ ಗಾಜಿನ ಮನೆಯಲ್ಲಿ ಕೂತಿದ್ದಾರೆ. FIR ಆದವರು ರಾಜೀನಾಮೆ ಕೊಡಬೇಕಾಗಿದ್ದರೆ, ಜೆಡಿಎಸ್ ನಲ್ಲಿ ಇರೋರು ಇಲ್ವಾ, ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದೆಯಾ, ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡ್ವಾ, ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ ಎಂದು ಪ್ರಶ್ನಿಸಿದರು.
ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನ್ನ ಆತ್ಮಸಾಕ್ಷಿ ಪ್ರಕಾರ ನಾನು ನಡೆಯುತ್ತಿದ್ದೇನೆ. ಎಲ್ಲಾ ನ್ಯಾಯಾಲಯಗಳಿಗಿಂತಲೂ ಆತ್ಮಸಾಕ್ಷಿಯ ನ್ಯಾಯಾಲಯ ದೊಡ್ಡದು. ಸತ್ಯಕ್ಕೆ ಯಾವಾಗಲೂ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದರು. ರಾಜ್ಯದ ಜನರ ಆಶೀರ್ವಾದದಿಂದ ನಾವು 136 ಸ್ಥಾನ ಗೆದ್ದಿದ್ದೇವೆ. 5 ವರ್ಷಗಳ ಅಭಿವೃದ್ಧಿ ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ದೇವರಾಜ ಅರಸು ಬಿಟ್ಟರೆ ಸಿಎಂ ಆಗಿ 5 ವರ್ಷ ಪೂರೈಸಿದ್ದು ಸಿದ್ದರಾಮಯ್ಯ ಮಾತ್ರ ಎಂದು ಹೇಳಿರುವ ಜಿಟಿ ದೇವೇಗೌಡ ಮುಡಾದ ಸದಸ್ಯರಾಗಿದ್ದರು, ಅವರಿಗೆ ಸತ್ಯ ಗೊತ್ತಿದೆ. ಅದಕ್ಕೇ ಅವರು ಇಂದು ಬೇರೆ ಪಕ್ಷದಲ್ಲಿದ್ದುಕೊಂಡು ಸತ್ಯವನ್ನೇ ಹೇಳುವ ಕೆಲಸ ಮಾಡಿದ್ದಾರೆ ಎಂದರು.
ವೀರ್ ಸಾವರ್ಕರ್ ಗೋಹತ್ಯೆಯ ವಿರೋಧಿಯಲ್ಲ. ಅವರು ಚಿತ್ಪಾವನ ಬ್ರಾಹ್ಮಣರಾಗಿದ್ದರಾದರೂ ಮಾಂಸಾಹಾರಿಯಾಗಿದ್ದರು. ಅಲ್ಲದೆ ಗೋಮಾಂಸ ಸೇವಿಸುತ್ತಿದ್ದರು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಆಯೋಜಿಸಿದ್ದ 'ಗಾಂಧೀಜಿಯ ಹಂತಕ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಈ ಹೇಳಿಕೆ ನೀಡಿದ್ದು ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈಬಗ್ಗೆ, ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾವರ್ಕರ್ ಮಾನಹಾನಿ ಮಾಡುವುದು ಕಾಂಗ್ರೆಸ್ ತಂತ್ರವಾಗಿದೆ. ಬ್ರಿಟಿಷರ ಒಡೆದು ಆಳುವ ನೀತಿಯನ್ನು ರಾಹುಲ್ ಗಾಂಧಿ ಬಳಸುತ್ತಿದ್ದು ಇದೀಗ ಆ ಪಕ್ಷದ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ಅಷ್ಟೇ ಅಲ್ಲದೆ ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನು ನೀಡಿದ್ದಾರೆ. ತಮ್ಮ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ದಿನೇಶ್ ಗುಂಡೂರಾವ್ ಕ್ಷಮೆಯಾಚಿಸಿದ್ದಾರೆ.
ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಮಾಜಿ ಪರಿಷತ್ ಸದಸ್ಯ ರಮೇಶ್ ಗೌಡ 50 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ತಾತಾ ಎಂಬುವರು ಇಬ್ಬರ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈ ದೂರು ಆಧರಿಸಿ ಪೊಲೀಸರು ಕುಮಾರಸ್ವಾಮಿ ಮತ್ತು ರಮೇಶ್ ಗೌಡ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಫಿಕ್ಸ್ ಆಗಿದೆ. ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದು 50 ಕೋಟಿ ರೂ. ಹೊಂದಿಸಿಕೊಡಬೇಕು. ಹಣ ಹೊಂದಿಸಿ ಕೊಡದಿದ್ದರೆ ನಾನು ಏನು ಮಾಡುತ್ತೇನೋ ಗೊತ್ತಿಲ್ಲ. ನೀನು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುವುದಷ್ಟೇ ಅಲ್ಲ. ನೀನು ಇಲ್ಲಿ ಬದುಕುವುದೇ ಕಷ್ಟವಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Advertisement