ಮೈಸೂರು: ನಾಡಹಬ್ಬ ದಸರಾ 2024ಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಹಿರಿಯ ಸಾಹಿತಿ ಡಾ ಹಂಪ ನಾಗರಾಜಯ್ಯ ಈ ಬಾರಿ ದಸರಾ ಉತ್ಸವವನ್ನು ಉದ್ಘಾಟಿಸಿದ್ದಾರೆ.
ಚಾಮುಂಡಿ ದೇವಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ರಾಜಕೀಯದಲ್ಲಿ ಸೋತ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು 5 ವರ್ಷಗಳ ನಂತರ ಅವಕಾಶವಿದೆ. ಪ್ರತಿಪಕ್ಷಗಳು ಸರ್ಕಾರ ಉರುಳಿಸುವ ಕೆಲಸಕ್ಕೆ ಮುಂದಾಗಬಾರದು ಎಂದು ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪರೋಕ್ಷವಾಗಿ ಹೇಳಿದರು.
ಸರ್ಕಾರ ಕೆಡವುವ ದುಸ್ಸಾಹಸ ಬೇಡ: ಯುವಜನತೆ ಮೋದಿ ಮೋದಿ ಎಂದು ಮುಂದುವರಿಯುತ್ತಿದ್ದಾರೆ. ಹಾಗೆಂದು ಸರ್ಕಾರ ಅಸ್ಥಿರಗೊಳಿಸುವ ಕೆಲಸವನ್ನು ಯಾರೂ ಮಾಡಬಾರದು. ದಸರಾ ಎಂಬುದು ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ, ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತ. ದಸರಾ ಅರಮನೆ ಹಬ್ಬವಲ್ಲ, ಜನ ಆರಿಸಿದ ಸರ್ಕಾರ ನಡೆಸುವ ಹಬ್ಬ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ ಎದೆಗುಂದದೆ ಸೆಡ್ಡು ಹೊಡೆದು ಗಟ್ಟಿಯಾಗಿ ನಿಂತಿದ್ದಾರೆ. ಜೀವನವೇ ದೊಡ್ಡ ಅಖಾಡ, ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ, ಸೌಮ್ಯ ಸ್ವಭಾವ ದೌರ್ಬಲ್ಯವಲ್ಲ ಎಂದರು. ಆ ಮೂಲಕ ಹಂಪ ನಾಗರಾಜಯ್ಯ ಪರೋಕ್ಷವಾಗಿ ಸಿದ್ದರಾಮಯ್ಯಗೆ ಧೈರ್ಯ ತುಂಬಿದರು. ಜತೆಗೆ, ಸಿಎಂ, ಡಿಸಿಎಂ ಒಂದು ರೀತಿಯಲ್ಲಿ ಗರಡಿ ಮನೆ ಆಳಿನಂತೆ ಜಟ್ಟಿಗಳು ಬಣ್ಣಿಸಿದರು.
ಇಸ್ರೇಲ್ – ಪ್ಯಾಲೆಸ್ಟೈನ್, ರಷಿಯಾ – ಉಕ್ರೈನ್ ಯುದ್ದ ನಿಲ್ಲಲಿ. ಹೆಣ್ಣು ಭ್ರೂಣ ಹತ್ಯೆ ನಿಲ್ಲಲಿ. ಶಾಸನಸಭೆಯಲ್ಲಿ ಸ್ತೀಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗಲಿ. ಸರ್ಕಾರ ಉರುಳಿಸುವ ದುರಾಲೋಚನೆ ಬರದಂತೆ ತಡೆದು ಚುನಾಯಿತ ಸರ್ಕಾರಗಳು ಉಳಿಯುವ ಚಿಂತನೆ ಮೂಡಲಿ ಎಂದು ಸಿಎಂಗೆ ಧೈರ್ಯ ತುಂಬಿದರು.
ಕೆಡವುದು ಸುಲಭ, ಕಟ್ಟುವುದು ಕಷ್ಟ. ಮತ್ತೆ ಮತ್ತೆ ಚುನಾವಣೆ ಬರುವುದು ಬೇಡ. ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯ. ಸೋತ ಪಕ್ಷವೂ ಮತ್ತೆ ಅಧಿಕಾರಕ್ಕೆ ಬರಲು ಐದು ವರ್ಷಗಳಲ್ಲಿ ಸಜ್ಜಾಗಬಹುದು. ದೋಷಾರೋಪಣೆ, ಅವಾಚ್ಯ ಶಬ್ಧ ಬಳಕೆಯೇ ಯುವಕರಿಗೆ ಮಾದರಿ ಆದರೆ ಏನೂ ಗತಿ ಎಂದು ಪ್ರಶ್ನಿಸಿದರು.
ಮೈಸೂರು ಅಂದರೆ ದಸರಾ, ದಸರಾ ಅಂದರೆ ಮೈಸೂರು ಎಂದು ನಾಗರಾಜಯ್ಯ ಬಣ್ಣಿಸಿದರು. ಇನ್ನು ಕಳೆದ ಜೂನ್ ತಿಂಗಳಲ್ಲಿ ನಿಧನರಾದ ತಮ್ಮ ಪತ್ನಿ ಹಿರಿಯ ಸಾಹಿತಿ ಡಾ ಕಮಲಾ ಹಂಪನಾ ಅವರನ್ನು ಕೂಡ ಸ್ಮರಿಸುತ್ತಾ ಭಾವುಕರಾದರು. 71 ವರ್ಷದ ಸ್ನೇಹದ ಸುಖ ನೀಡಿದೆ. 63 ವರ್ಷ ಪತಿಯಾಗಿ ಜೊತೆಯಾಗಿದ್ದೆ. ಆರು ವರ್ಷಗಳ ಕಾಲ ಸಹಪಾಠಿಯಾಗಿದ್ದೆ. ನಿನ್ನ ದಿವ್ಯ ನೆನಪಿಗೆ ಈ ಗೌರವ ಸಮರ್ಪಣೆ ಎಂದು ಹೇಳಿ ಭಾವುಕರಾದರು.
Advertisement