ಸಿಎಂ ಬದಲಾವಣೆ ಊಹಾಪೋಹಗಳ ನಡುವೆ ಜಾರಕಿಹೊಳಿ- ಖರ್ಗೆ ಭೇಟಿ!; ದಸರಾ ಉದ್ಘಾಟನಾ ಕಾರ್ಯಕ್ರಮದ ಪಾವಿತ್ರ್ಯತೆ ಹಾಳಾಗಿದೆ- ಹೆಚ್ ವಿಶ್ವನಾಥ್; ಮೆಟ್ರೋ ಪ್ರಯಾಣ ದರ ಶೀಘ್ರವೇ ಏರಿಕೆ; ಇವು ಇಂದಿನ ಪ್ರಮುಖ ಸುದ್ದಿಗಳು 04-10-2024

File pic
ಸುದ್ದಿ ಮುಖ್ಯಾಂಶಗಳು ( ಸಂಗ್ರಹ ಚಿತ್ರ)online desk

1. ಕುತೂಹಲ ಮೂಡಿಸಿದ ಖರ್ಗೆ-ಜಾರಕಿಹೊಳಿ ದಿಢೀರ್ ಭೇಟಿ

ಮುಡಾ ಹಗರಣದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷಗಳ ಒತ್ತಡ ಹೆಚ್ಚಾಗುತ್ತಿದೆ. ಈ ಮಧ್ಯೆ ಸಚಿವ ಸತೀಶ್ ಜಾರಕಿಹೊಳಿ-ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದಿಢೀರ್ ಭೇಟಿ ಕುತೂಹಲ ಮೂಡಿಸಿದೆ. ಒಂದು ಗಂಟೆಗೂ ಹೆಚ್ಚು ಕಾಲ ಖರ್ಗೆ ಸತೀಶ್ ಜಾರಕಿಹೊಳಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಒಂದು ವೇಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭ ಎದುರಾದರೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ನಾಯಕರಿಗೆ ಸಿಎಂ ಸ್ಥಾನ ಸಿಗಬೇಕು. ಇದಕ್ಕೆ ನಾವೆಲ್ಲ ಒಗ್ಗಟ್ಟಾಗಿ ನಿಂತು ಸಿಎಂ ಸ್ಥಾನವನ್ನು ಸಮುದಾಯಕ್ಕೆ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಖರ್ಗೆ ಅವರ ಜೊತೆಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ. ದಲಿತ ಸಚಿವರೊಂದಿಗೆ ಸತೀಶ್ ಜಾರಕಿಹೊಳಿ ಸಭೆ ನಡೆಸಿದ ಬೆನ್ನಲ್ಲೇ ಖರ್ಗೆಯವರನ್ನು ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ.

2. ಬೆಂಗಳೂರಿನ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇ-ಮೇಲ್

ಬೆಂಗಳೂರಿನ ಬಿಎಂಎಸ್ ಕಾಲೇಜು, ವಿ.ವಿ.ಪುರಂನಲ್ಲಿರುವ ಬಿಐಟಿ ಕಾಲೇಜು ಸೇರಿದಂತೆ ಕೆಲವು ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು ಆತಂಕಕ್ಕೆ ಕಾರಣವಾಗಿತ್ತು. ಕೂಡಲೇ ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕಿಯ ಸಿಬ್ಬಂದಿ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಮುಂಜಾಗೃತ ಕ್ರಮವಾಗಿ ಪೊಲೀಸರು ಮೂರು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಹೊರಕ್ಕೆ ಕಳುಹಿಸಿದ್ದರು. ಪರಿಶೀಲನೆ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸೆ.28 ರಂದು ಬೆಂಗಳೂರಿನ ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ಹೋಟೆಲ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹೋಟೆಲ್ ಒಟೆರಾ ಗೆ ಇ-ಮೇಲ್ ಮೂಲಕ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿದ್ದರು.

3. ದಸರಾ ಉದ್ಘಾಟನಾ ಕಾರ್ಯಕ್ರಮದ ಪಾವಿತ್ರ್ಯತೆ ಹಾಳಾಗಿದೆ- ಹೆಚ್ ವಿಶ್ವನಾಥ್

ಚಮಚಾಗಿರಿಯ ಭಾಷಣ ಹಾಗೂ ರಾಜಕಾರಣದ ಘಮಲಿನಿಂದಾಗಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಡೆದ ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದ ಪಾವಿತ್ರ್ಯತೆ ಹಾಳಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ರಾಜಕೀಯ ಮಾತನಾಡುವ ವೇದಿಕೆ ಅದಾಗಿರಲಿಲ್ಲ. ದಸರಾ ಉದ್ಘಾಟಿಸಿದ ಸಾಹಿತಿ ಹಂಪ ನಾಗರಾಜಯ್ಯ ಅವರೂ ರಾಜಕೀಯ ಭಾಷಣ ಮಾಡಿದ್ದಾರೆ. ಮಹಾರಾಜರ ಕೊಡುಗೆ, ನಾಡಹಬ್ಬದ ಐತಿಹಾಸಿಕ ಮಹತ್ವದ ಬಗ್ಗೆ ಮಾತನಾಡದೇ, ಕೆಳಮಟ್ಟದ ಕೆಲಸವನ್ನು ನಮ್ಮ ರಾಜಕಾರಣಿಗಳು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಿಂದೆ ಚಾಮುಂಡೇಶ್ವರಿಯ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಈಗ ಪದೇ ಪದೇ ಆ ತಾಯಿಯ ಆಶೀರ್ವಾದ ಬೇಡಿದ್ದಾರೆ. ನಾನೇನೂ ತಪ್ಪು ಮಾಡಿಲ್ಲ ಎಂದು ಪುನರುಚ್ಚರಿಸುತ್ತಿದ್ದಾರೆ. ಇದರ ಅರ್ಥವೇನು ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.

4. ಕಲುಶಿತ ನೀರು ಸೇವನೆ, 2 ಗ್ರಾಮದ ಸಾವಿರ ಮಂದಿ ಅಸ್ವಸ್ಥ

ಕಲುಶಿತ ನೀರು ಸೇವನೆಯಿಂದ ಉಡುಪಿ ಜಿಲ್ಲೆಯ 2 ಗ್ರಾಮಗಳಲ್ಲಿ ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾರೆ. ಸ್ಥಳೀಯ ಓವರ್ ಹೆಡ್ ನೀರಿನ ಟ್ಯಾಂಕ್ ನಿಂದ ಈ ನೀರು ಪೂರೈಕೆಯಾಗಿತ್ತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅಸ್ವಸ್ಥಗೊಂಡಿರುವವರ ಪೈಕಿ ಯಾರ ಆರೋಗ್ಯ ಸ್ಥಿತಿಯೂ ಗಂಭೀರವಾಗಿಲ್ಲ. ಸೂಕ್ತ ವೈದ್ಯಕೀಯ ನೆರವಿನಿಂದ ಬಹುತೇಕ ಮಂದಿಯ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್‌ನ ಕರ್ಕಿ ಕಲ್ಲಿ ಮತ್ತು ಮಡಿಕಲ್ ನಲ್ಲಿ ಹೆಚ್ಚು ಮಂದಿ ಬಾಧಿತರಾಗಿದ್ದು ವಾಂತಿ ಮತ್ತು ಭೇದಿಯಂತಹ ರೋಗಲಕ್ಷಣಗಳನ್ನು ಹೊಂದಿದ್ದಾರೆ.

5. ಮೆಟ್ರೋ ಪ್ರಯಾಣ ದರ ಶೀಘ್ರವೇ ಏರಿಕೆ

ನಗರದ ಜನತೆಗೆ ಮತ್ತೊಂದು ದರ ಏರಿಕೆಯ ಶಾಕ್ ಕಾದಿದೆ. ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಬಿಎಂಆರ್ಸಿಎಲ್ ಮುಂದಾಗಿದೆ. ಟಿಕೆಟ್ ದರ ನಿಗದಿಗೆ ಈಗಾಗಲೇ ಬಿಎಂಆರ್ಸಿಎಲ್ ಸಮಿತಿ ರಚಿಸಿದ್ದು, ವರದಿ ಸಲ್ಲಿಸಲು 90 ದಿನಗಳ ಕಾಲಾವಕಾಶ ನೀಡಿದೆ.ಪ್ರಸ್ತುತ, ನಮ್ಮ ಮೆಟ್ರೋ ಟಿಕೆಟ್ ಕನಿಷ್ಠ ದರ 10 ರೂ. ಮತ್ತು ಗರಿಷ್ಠ 60 ರೂ.ಇದೆ. ಸಮಿತಿ ಕಾರ್ಯಾಚರಣೆಯ ವೆಚ್ಚ, ಅಂತರರಾಷ್ಟ್ರೀಯ ಏಜೆನ್ಸಿಗಳಿಗೆ ವಾರ್ಷಿಕವಾಗಿ ಪಾವತಿಸುವ ಬಡ್ಡಿ, ಮರುಪಾವತಿಸುತ್ತಿರುವ ಸಾಲದ ಮೊತ್ತ ಮತ್ತು ಇತರ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡು ದರ ನಿಗದಿ ಮಾಡಲಿದೆ.

6. ಅಕ್ಟೋಬರ್ 4 ರಿಂದ 7ರವರೆಗೆ ಬೆಸ್ಕಾಂ ಆನ್ ಲೈನ್ ಸೇವೆ ಅಲಭ್ಯ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಅಪ್ಡೇಟ್ ಆಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 4 ರಿಂದ 7ರವರೆಗೆ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಇಂಧನ ಇಲಾಖೆ ತಿಳಿಸಿದೆ. ಹೊಸ ಆ್ಯಪ್ ಗಳು ದಕ್ಷತೆಯನ್ನು ಹೆಚ್ಚಿಸುತ್ತವೆ ಮತ್ತು ಕಾರ್ಯಾಚರಣೆಯ ನಂತರ ಬಳಕೆದಾರರ ಅನುಭವವನ್ನು ಸುಧಾರಿಸುತ್ತದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com