
ಕೋಲಾರ: ಅಕ್ಟೋಬರ್ 12 ರಂದು ನಡೆಯಲಿರುವ ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕೋಲಾರದ ಕೋಟಿಲಿಂಗೇಶ್ವರ ದೇವಾಲಯದ ಸ್ತಬ್ಧ ಚಿತ್ರ ಆಯ್ಕೆಯಾಗಿದೆ.
ಈ ಕುರಿತು TNIE ಯೊಂದಿಗೆ ಮಾತನಾಡಿದ ಕೋಲಾರ ಜಿಲ್ಲಾಧಿಕಾರಿ ಅಕ್ರಮ್ ಪಾಷಾ, ಕೈಗಾರಿಕಾ ಉಪನಿರ್ದೇಶಕ ರವಿಚಂದ್ರ ನೇತೃತ್ವದ ತಂಡ ಕೋಲಾರದ ಕೋಟಿಲಿಂಗೇಶ್ವರ, ಸೋಮೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಮುಳಬಾಗಲಿನ ಕುರುಡು ಮಲೆ ಗಣಪತಿ ದೇವಾಲಯದ ಸ್ತಬ್ಧಚಿತ್ರಗಳನ್ನು ಸಚಿವ ಡಾ.ಹೆಚ್. ಸಿ. ಮಹದೇವಪ್ಪ ಮತ್ತು ಜಿಲ್ಲಾಧಿಕಾರಿ ನೇತೃತ್ವದ ಮೈಸೂರು ದಸರಾ ಆಯ್ಕೆ ಸಮಿತಿ ಮುಂದಿಟ್ಟಿದ್ದರು. ಈ ಪೈಕಿ ಕೋಲಾರ ಜಿಲ್ಲೆಯನ್ನು ಪ್ರತಿನಿಧಿಸಲು ಕೋಟಿಲಿಂಗೇಶ್ವರ ದೇವಾಲಯದ ಸ್ತಬ್ಧಚಿತ್ರವನ್ನು ಸಮಿತಿಯವರು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.
ಕೋಲಾರ ಜಿಲ್ಲಾ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ರವಿಚಂದ್ರ ಮಾತನಾಡಿ, ತಮ್ಮ ನೇತೃತ್ವದ ತಂಡವೊಂದು ಮೈಸೂರಿನಲ್ಲಿ ಮೊಕ್ಕಾಂ ಹೂಡಿದೆ. ಒಂದು ಅಥವಾ ಎರಡು ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಮೈಸೂರಿನಲ್ಲಿಯೇ ಕೆಲಸ ಕೈಗೆತ್ತಿಕೊಳ್ಳಲಾಗುವುದು. ವಿಜಯದಶಮಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರ ಪ್ರದರ್ಶನ ಇರಲಿದೆ ಎಂದು ತಿಳಿಸಿದರು.
ದೇವಸ್ಥಾನದ ಆಡಳಿತಾಧಿಕಾರಿ ಕುಮಾರಿ ಮಾತನಾಡಿ, ಸಾಂಬಶಿವಮೂರ್ತಿ ಸ್ವಾಮೀಜಿಯವರು ದೇವಸ್ಥಾನದಲ್ಲಿ ಸಾವಿರಾರು ಶಿವಲಿಂಗಗಳನ್ನು ಹೊಂದಿರುವ ದೇವಸ್ಥಾನವನ್ನು ನಿರ್ಮಿಸಿದ್ದಾರೆ. 108 ಅಡಿ ಎತ್ತರದ ಶಿವಲಿಂಗ ಮತ್ತು ನಂದಿ ಜನಪ್ರಿಯ ಆಕರ್ಷಣೆಯಾಗಿದ್ದು, ರಾಜ್ಯದಿಂದ ಮಾತ್ರವಲ್ಲದೆ ರಾಷ್ಟ್ರದ ಇತರ ಭಾಗಗಳಿಂದಲೂ ಭಕ್ತರನ್ನು ಸೆಳೆಯುತ್ತದೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ ಎಂದು ಹೇಳಿದರು.
Advertisement