
ಮೈಸೂರು: ಈ ಬಾರಿಯ ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಭಾಗವಹಿಸದಿರುವ ಲೇಖಕಿ ಬಾನು ಮುಷ್ತಾಕ್ ನಿರ್ಧರಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ಖಾತೆಯಲ್ಲಿ ಭಾನುವಾರ ಫೋಸ್ಟ್ ಹಾಕುವ ಮೂಲಕ ತಮ್ಮ ತೀರ್ಮಾನವನ್ನು ತಿಳಿಸಿದ್ದಾರೆ.
ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಲು ಒಪ್ಪಿದ್ದೆ. ಈ ಹಿಂದೆ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದೆ. ಆದರೆ, ಇತ್ತೀಚಿನ ಕೆಲವು ಸಂವಾದಗಳನ್ನು ಗಮನಿಸಿದಾಗ, ಬೇರೆಯವರಿಗೆ ಅವಕಾಶ ಕೊಡುವುದು ಅಗತ್ಯವೆಂದು ಅನಿಸಿದೆ. ಹೀಗಾಗಿ 2024ರ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದೇನೆ. ನಿಮಗೆ ಉಂಟಾಗಿರುವ ಅನಾನುಕೂಲಕ್ಕೆ ಕ್ಷಮೆ ಇರಲಿ ಎಂದಿದ್ದಾರೆ.
ಕವಿಗೋಷ್ಠಿಯಲ್ಲಿ ಈ ಹಿಂದೆ ಪಾಲ್ಗೊಂಡಿದ್ದವರಿಗೆ ಮತ್ತೆ ಅವಕಾಶ ಕೊಟ್ಟಿರುವುದು, ದಕ್ಷಿಣ ಕರ್ನಾಟಕದವರಿಗೆ ಹೆಚ್ಚಿನ ಆದ್ಯತೆ ನೀಡಿರುವ ಉಪ ಸಮಿತಿ ನಡೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪವಾದ ಹಿನ್ನೆಲೆಯಲ್ಲಿ ಅವರು ಈ ಬಾರಿಯ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕವಿಗೋಷ್ಠಿಯಿಂದ ಹಿಂದೆ ಸರಿದವರಲ್ಲಿ ಕವಿ ಆರಿಫ್ ರಾಜಾ ನಂತರ ಬಾನು 2ನೇಯವರಾಗಿದ್ದಾರೆ. ತಾನು ದಸರಾ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿರುವುದಾಗಿ ಆರಿಫ್ ರಾಜಾ ಶನಿವಾರ ತಿಳಿಸಿದ್ದರು.
Advertisement