ಬೆಂಗಳೂರಿಗೆ ಆಗಮಿಸಿರುವ ಮಾಲ್ಡೀವ್ಸ್ ಅಧ್ಯಕ್ಷರನ್ನು ಸಿಎಂ ಸಿದ್ದರಾಮಯ್ಯ ಇಂದು ರಾಜಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಬೆಂಗಳೂರಿನಲ್ಲಿ ಪ್ರಮುಖವಾಗಿರುವ ಐಟಿ ಉದ್ಯಮದೊಂದಿಗೆ ಪಾಲುದಾರಿಕೆಯನ್ನು ಹೊಂದಲು ಮಾಲ್ಡೀವ್ಸ್ ಸರ್ಕಾರ ಆಸಕ್ತಿ ಹೊಂದಿದೆ ಎಂಬುದು ಈ ಸಭೆಯ ಮೂಲಕ ತಿಳಿದುಬಂದಿದೆ. ಮಾಲ್ಡೀವ್ಸ್‌ನಲ್ಲಿ ಐಟಿ ಉದ್ಯಮದ ಬೆಳವಣಿಗೆಗೆ ನಾವು ಸಂತೋಷದಿಂದ ಪ್ರೋತ್ಸಾಹ ನೀಡುತ್ತೇವೆ" ಎಂದು ಸಿಎಂ ಹೇಳಿದ್ದಾರೆ. ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ರಾಜ್ಯದ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳನ್ನು ಉತ್ತೇಜಿಸಲು ಉತ್ಸುಕರಾಗಿದ್ದೇವೆ ಎಂದು ಸಿಎಂ ಇದೇ ವೇಳೆ ತಿಳಿಸಿದ್ದಾರೆ.
ಶಾಸಕ ಮುನಿರತ್ನ ಇಬ್ಬರು ಮಾಜಿ ಮುಖ್ಯಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ನನಗೆ ಸರ್ಕಾದಿಂದ ಭದ್ರತೆ ಕೊಟ್ಟಲ್ಲಿ ನಾನು ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಹಾಗೂ ಸಂಬಂಧಿತ ವಿಡಿಯೋವನ್ನು ಕೊಡುವುದಾಗಿ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿರುವ ಸಂತ್ರಸ್ತ ಮಹಿಳೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸತ್ರ ಮಹಿಳೆ, ಮಾಜಿ ಸಿಎಂ ಇಬ್ಬರಿಗೆ ಹನಿಟ್ರ್ಯಾಪ್ ಮಾಡಿ ಟಾರ್ಚರ್ ನೀಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು. ಮುನಿರತ್ನ ನಮ್ಮಂಥವರ ಅಸಹಾಯಕತೆ ಬಳಸಿಕೊಂಡು ಮಾಜಿ ಸಿಎಂ, ಸಚಿವರು, ಮಾಜಿ ಸಿಎಂ, ಶಾಸಕರ ಹನಿಟ್ರ್ಯಾಪ್ ವೀಡಿಯೋ ಮಾಡಿಸಿದ್ದಾರೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ನನ್ನ ಹಾಗೂ ಮುನಿರತ್ನ ಬ್ರೈನ್ ಮ್ಯಾಪಿಂಗ್ ಮಾಡಿಸಲಿ ಎಂದು ಸಂತ್ರಸ್ತೆ ಆಗ್ರಹಿಸಿದ್ದಾರೆ. ಹನಿಟ್ರ್ಯಾಪ್ ಮಾಡುವುದಕ್ಕೆ ನನ್ನನ್ನು ಬಳಕೆ ಮಾಡಿಕೊಂಡಿಲ್ಲ, ಬೇರೆ ಮಹಿಳೆಯರನ್ನು ಬಳಸಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಸಿನಿಮಾ ನಟಿಯರು ಇಲ್ಲ ಎಂದು ಸಂತ್ರಸ್ತೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ಅಕ್ಟೋಬರ್ 10ಕ್ಕೆ ಮುಂದೂಡಿದೆ. ಆರಂಭದಲ್ಲಿ ವಾದ ಮಂಡಿಸಿದ್ದ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್, ಪೊಲೀಸರ ತನಿಖೆ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಪೊಲೀಸರೇ ಸಾಕ್ಷ್ಯಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ವಾದಿಸಿದ್ದರು. ಪ್ರತಿವಾದ ಮಂಡಿಸಿದ ಎಸ್ಪಿಪಿ ಪ್ರಸನ್ನ ಕುಮಾರ್, ನಿನ್ನೆ ಮಂಡಿಸಿದ ವಾದದಲ್ಲಿ ನಾಗೇಶ್ ಅವರು ಎತ್ತಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಈಮಧ್ಯೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್ ಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿದ ಪ್ರಕರಣದಲ್ಲಿ ದರ್ಶನ್ ಮೇಲೆ ಬೀಳಬೇಕಿದ್ದ ಪ್ರಕರಣವನ್ನು ಪ್ರದೋಷ್ ಎಂಬ ಆರೋಪಿ ಮೇಲೆ ಹೊರಿಸಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಬೆಳಗಾವಿ ಕಾರಾಗೃಹದಿಂದ ಆತನನ್ನು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.
ನನ್ನ ವಿರುದ್ಧ ಮಹಿಳೆಯೊಬ್ಬರು ಕಿರುಕುಳ ಆರೋಪ ಹೊರಿಸಿದ್ದಾರೆ ಮತ್ತು ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥರೊಬ್ಬರು 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಶಾಸಕ ವಿನಯ್ ಕುಲಕರ್ಣಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ನಡೆದಿದ್ದು, ಎರಡು-ಮೂರು ಸಲ ನಡೆದ ವಿಡಿಯೊ ಕಾಲ್ ಸಂಭಾಷಣೆ ಇಟ್ಟುಕೊಂಡು ನನ್ನ ವಿರುದ್ಧ ಅತ್ಯಾಚಾರದ ಆರೋಪ, ಪ್ರಕರಣ ದಾಖಲಿಸಲಾಗಿದೆ ಎಂದು ವಿನಯ್ ಕುಲಕರ್ಣಿ ಆರೋಪಿಸಿದ್ದು, ದೂರಿನ ಮೇರೆಗೆ ಬೆಂಗಳೂರಿನ ಸಂಜಯನಗರ ಪೊಲೀಸರು ಖಾಸಗಿ ಕನ್ನಡ ಸುದ್ದಿ ವಾಹಿನಿಯ ಮಾಲೀಕ ರಾಕೇಶ್ ಶೆಟ್ಟಿ ಮತ್ತು ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ತನ್ನ ಮೇಲೆ ಅತ್ಯಾಚಾರ ಎಸಗಿ, ಕಿರುಕುಳ ನೀಡಿದ್ದಾರೆಂದು ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಾಲ್ಮೀಕಿ ನಿಗಮದ ಹಗರಣ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ PMLA ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಅವರನ್ನು ಬಹುಕೋಟಿ ಹಗರಣದ ಮಾಸ್ಟರ್ ಮೈಂಡ್ ಎಂದು ಉಲ್ಲೇಖಿಸಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರಿಗಾಗಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ವರದಿಯಲ್ಲಿ ಜಾರಿ ನಿರ್ದೇಶನಾಲಯ ಆರೋಪಿಸಿದೆ. ತಾನು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಈ ವೆಚ್ಚಗಳ "ಸಾಕ್ಷ್ಯ" ಪತ್ತೆಯಾಗಿದ್ದು ಆರ್ಥಿಕ ವಿಶ್ಲೇಷಣೆ ಮತ್ತು ಹೇಳಿಕೆಗಳಿಂದ ದೃಢೀಕರಿಸಲಾಗಿದೆ ಎಂದು ED ಹೇಳಿದೆ.
Advertisement