ಬಿಜೆಪಿ ಸರ್ಕಾರದ ಅವಧಿಯ ‘ಕೋವಿಡ್ ಹಗರಣ’ ತನಿಖೆಗೆ ಎಸ್‌ಐಟಿ ರಚಿಸಲು ಸಚಿವ ಸಂಪುಟ ಅನುಮೋದನೆ: ಎಚ್ ಕೆ ಪಾಟೀಲ್

ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾ.ಮೈಕಲ್ ಡಿ.ಕುನ್ಹಾ ಅವರ ವಿಚಾರಣಾ ಆಯೋಗ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿದೆ. ಅದರ ಆಧಾರದ ಮೇಲೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ.
ಎಚ್. ಕೆ. ಪಾಟೀಲ್
ಎಚ್. ಕೆ. ಪಾಟೀಲ್
Updated on

ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚನೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಎಸ್‌ಐಟಿ ಜೊತೆಗೆ ಸಚಿವ ಸಂಪುಟ ಉಪ ಸಮಿತಿಯೊಂದನ್ನು ರಚನೆ ಮಾಡಲಾಗುವುದು ಎಂದು ಹೇಳಿದರು. ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾ.ಮೈಕಲ್ ಡಿ.ಕುನ್ಹಾ ಅವರ ವಿಚಾರಣಾ ಆಯೋಗ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿದೆ. ಅದರ ಆಧಾರದ ಮೇಲೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಪ್ರಮುಖವಾಗಿ ಇದರಲ್ಲಿ ಕ್ರಿಮಿನಲ್ ಅಂಶಗಳು ಇರುವ ಹಿನ್ನೆಲೆಯಲ್ಲಿ ಎಸ್‌ಐಟಿ ರಚನೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಿಚಾರಣಾ ಆಯೋಗವು 11 ಸಂಪುಟಗಳಲ್ಲಿ ವರದಿ ನೀಡಿದೆ. 7223.64 ಕೋಟಿ ರೂ.ಮೊತ್ತದ ಅವ್ಯವಹಾರ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, 500 ಕೋಟಿ ರೂ.ಗಳನ್ನು ಸಂಬಂಧಪಟ್ಟವರಿಂದ ವಸೂಲು ಮಾಡುವಂತೆ ಶಿಫಾರಸ್ಸು ಮಾಡಿದೆ. ಅದರಂತೆ, ಸಂಬಂಧಪಟ್ಟವರಿಂದ ಹಣ ವಸೂಲು ಮಾಡುವ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಎಚ್. ಕೆ. ಪಾಟೀಲ್
ಕೋವಿಡ್ ಹಗರಣ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಪಿಎಸಿ ಶಿಫಾರಸು

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂಟು ವಲಯಗಳಿದ್ದು, ಅದರಲ್ಲಿ ನಾಲ್ಕು ವಲಯಗಳಿಂದ ಮಾಹಿತಿ ಬಂದಿಲ್ಲ. ರಾಜ್ಯದ 31 ಜಿಲ್ಲೆಗಳ ವರದಿ ಬರುವುದು ಬಾಕಿಯಿದೆ. ಸಂಗ್ರಹ ಬಾಕಿ ಇದೆ. 50 ಸಾವಿರಕ್ಕೂ ಹೆಚ್ಚು ಕಡತಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ಪರಿಶೀಲಿಸಿ ವಿಚಾರಣಾ ಆಯೋಗ ವರದಿ ನೀಡಿದೆ. ಈ ಹಗರಣದಲ್ಲಿ ಶಾಮೀಲಾಗಿರುವ ಕಂಪೆನಿಗಳು, ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಹಗರಣದಲ್ಲಿ ಯಾರ ಪಾತ್ರ ಏನು ಎಂಬುದು ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬರಲಿದೆ. ವಿಚಾರಣಾ ಆಯೋಗದ ಪೂರ್ಣ ವರದಿ ಬಂದ ಬಳಿಕ ಏನೇನು ಅವ್ಯವಹಾರ ಆಗಿದೆ, ಯಾರೆಲ್ಲ ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದೆಲ್ಲ ಗೊತ್ತಾಗುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸಂಪುಟ ಸಭೆ ನಿರ್ಧರಿಸಿದೆ. ಗಣಿಗಾರಿಕೆಯಲ್ಲಿನ ಅಕ್ರಮಗಳ ತನಿಖೆಗಾಗಿ ಕರ್ನಾಟಕ ಲೋಕಾಯುಕ್ತದಲ್ಲಿ ರಚಿಸಲಾದ ಎಸ್‌ಐಟಿಯ ಅವಧಿಯನ್ನು ಒಂದು ವರ್ಷ ವಿಸ್ತರಿಸಲು ಸಂಪುಟ ಅನುಮೋದನೆ ನೀಡಿದೆ.

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ (ಕೆಎಸ್‌ಎಂಸಿಎಲ್) ಸಂಪೂರ್ಣ ಬಂಡವಾಳ ಹೂಡಿಕೆಯೊಂದಿಗೆ ಓಕಳಿಪುರಂನಲ್ಲಿ ರೇಷ್ಮೆ ಇಲಾಖೆ ಒಡೆತನದ 4.25 ಎಕರೆ ಜಮೀನಿನಲ್ಲಿ ಅಂದಾಜು 527.50 ಕೋಟಿ ರೂ.ಗಳ "ರೇಷ್ಮೆ ಭವನ" ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ 200 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಹೈಟೆಕ್ ಕೋಕೂನ್ ಮಾರುಕಟ್ಟೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com