
ಮೈಸೂರು: ನಾಡಿನೆಲ್ಲೆಡೆ ದಸರಾ ಹಬ್ಬದ ಸಡಗರ ಮಧ್ಯೆ ಇಂದು ಆಯುಧಪೂಜೆಯನ್ನು ಆಚರಿಸಲಾಗುತ್ತಿದೆ. ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಆಯುಧ ಪೂಜಾ ಕೈಕಂರ್ಯಗಳು ನೆರವೇರಿವೆ. ಅರಮನೆಯ ಪೂರ್ವಜರು ಬಳಸುತ್ತಿದ್ದ ಆಯುಧಗಳನ್ನು ಸ್ವಚ್ಛಗೊಳಿಸಿ, ಅವುಗಳನ್ನು ಮಂಗಳವಾದ್ಯದೊಂದಿಗೆ ಅರಮನೆಗೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಗಿದೆ.
ಬೆಳಗ್ಗೆಯಿಂದಲೇ ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜಾ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ಪುರಾತನ ರಾಜವಂಶಸ್ಥರು ಬಳಸುತ್ತಿದ್ದ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯದ ಬಳಿ ತೆಗೆದುಕೊಂಡು ಹೋಗಿ ಸ್ವಚ್ಚಗೊಳಿಸಲಾಯಿತು. ಬಳಿಕ ರಾಜಪರಂಪರೆಯಂತೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಇಟ್ಟು ಪಟ್ಟದ ಆನೆ, ಪಟ್ಟದ ಹಸು ಜತೆಗೆ ಮಂಗಳವಾದ್ಯಗಳ ಮೂಲಕ ಆಯುಧಗಳನ್ನು ಕಲ್ಯಾಣ ಮಂಟಪಕ್ಕೆ ತೆಗೆದುಕೊಂಡು ಹೋಗಿ ಇಡಲಾಯಿತು.
ಬೆಳಗ್ಗೆ 6ಕ್ಕೆ ಚಾಮುಂಡಿ ತೊಟ್ಟಿಯಲ್ಲಿ ಚಂಡಿಕಾ ಹೋಮ ನಡೆಯಿತು. ಆ ವೇಳೆಗೆ ಆನೆ ಬಾಗಿಲಿಗೆ ಪಟ್ಟದ ಹಸು ಆಗಮನವಾಯಿತು. ಬೆಳಗ್ಗೆ 6.40ರಿಂದ 7.10ರ ಸಮಯದಲ್ಲಿ ಅರಮನೆ ಕಲ್ಯಾಣ ಮಂಟಪದಿಂದ ಆನೆ ಬಾಗಿಲಿನ ಮೂಲಕ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಅವುಗಳನ್ನು ಸ್ವಚ್ಛಗೊಳಿಸಿ 7.30ರಿಂದ 8 ಗಂಟೆಯವರೆಗೆ ಕಲ್ಯಾಣ ಮಂಟಪಕ್ಕೆ ತರಲಾಯಿತು. ಬೆಳಗ್ಗೆ 9.05ಕ್ಕೆ ಚಂಡಿಕಾ ಹೋಮ, ಪೂರ್ಣಾಹುತಿ ಆದ ಬಳಿಕ ಮಧ್ಯಾಹ್ನ 12.20ರಿಂದ 12.45ರವರೆಗೆ ಕಲ್ಯಾಣ ಮಂಟಪದಲ್ಲಿ ಯದುವೀರ್ ಆಯುಧಗಳಿಗೆ ಪೂಜೆ ಸಲ್ಲಿಸಿದರು.
ಬಳಿಕ ಆನೆ ತೊಟ್ಟಿಯಲ್ಲಿ ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಆನೆ, ಪಲ್ಲಕ್ಕಿ ಹಾಗೂ ರಾಜರು ಬಳಸುವ ದುಬಾರಿ ಬೆಲೆಯ ಕಾರುಗಳಿಗೆ ಪೂಜೆ ಸಲ್ಲಿಸಿದರು. ಸಂಜೆ ರತ್ನ ಖಚಿತ ಸಿಂಹಾಸನದಲ್ಲಿ ಖಾಸಗಿ ದರ್ಬಾರ್ ನಡೆಸಿ, ಬಳಿಕ ಸಿಂಹಾಸನದಲ್ಲಿ ಜೋಡಿಸಲಾದ ಸಿಂಹದ ತಲೆಯನ್ನು ವಿಸರ್ಜನೆ ಮಾಡುತ್ತಾರೆ.
Advertisement