ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ A4 ಆರೋಪಿಯಾಗಿರುವ ದೇವರಾಜು ಅವರನ್ನು ಗುರುವಾರ ಲೋಕಾಯುಕ್ತ ಅಧಿಕಾರಿಗಳು ಸತತ 10 ಗಂಟೆಗಳ ವಿಚಾರಣೆ ನಡೆಸಿದರು.
ಮೈಸೂರು ಲೋಕಾಯುಕ್ತ ಪೊಲಿಸರು ಈಗಾಗಲೇ ಕೆಸರ ಜಮೀನು ಹಾಗೂ ನಿವೇಶನ ಪಡೆದ ವಿಜಯನಗರ ಸ್ಥಳ ಮಹಜರು ನಡೆಸಿದ್ದು, ಈ ಬಗ್ಗೆ ತನಿಖೆಗೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಅಂತೆಯೇ ಲೋಕಾಯಕ್ತ ವಿಚಾರಣೆಗೆ ಇಬ್ಬರೂ ಹಾಜರಾಗಿದ್ದರು. ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಜೆ. ದೇವರಾಜು ಅವರನ್ನು ಹಾಗೂ ಬೆಳಿಗ್ಗೆ 11.30ರಿಂದ ರಾತ್ರಿ 9ರವರೆಗೆ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಲೋಕಾಯುಕ್ತ ಎಸ್‌ಪಿ ಟಿ.ಜೆ. ಉದೇಶ್ ನೇತೃತ್ವದ ತಂಡವು ವಿಚಾರಣೆಗೆ ಒಳಪಡಿಸಿತು. ಮಧ್ಯಾಹ್ನ ಕಚೇರಿಯಲ್ಲೇ ಊಟ ತರಿಸಿಕೊಟ್ಟು, ಇಬ್ಬರಿಗೂ ಹಲವು ಪ್ರಶ್ನೆಗಳನ್ನು ಮುಂದಿಟ್ಟಿತು. ಅಧಿಕಾರಿಗಳ ನಿರಂತರ ಪ್ರಶ್ನೆಗಳಿಗೆ ಆರೋಪಿಗಳು ಬೆವರಿದರು.
ಜಮೀನನ್ನು ಖರೀದಿಸಿದ್ದು ಯಾವಾಗ? ಆಗ ಮುಡಾದಿಂದ ಬಡಾವಣೆ ಆಗಿದ್ದು ಗಮನಕ್ಕೆ ಬಂದಿರಲಿಲ್ಲವೇ? ಖರೀದಿಸುವಾಗ ಜಮೀನು ಕೃಷಿ ಭೂಮಿಯಾಗಿತ್ತೆ? ಅನ್ಯಕ್ರಾಂತ ಆದೇಶ ಆಗಿದ್ದು ಯಾವಾಗ? ಪಾರ್ವತಿ ಅವರಿಗೆ ದಾನಪತ್ರದ ರೂಪದಲ್ಲಿ ಕೊಟ್ಟಿದ್ದು ಯಾವಾಗ? ಆದಾಯದ ಮೂಲವೇನು?’ ಎಂಬ ಕುರಿತು ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಮಾಹಿತಿ ಪಡೆದ ತನಿಖಾ ತಂಡವು ನಂತರ ಲಿಖಿತ ಹೇಳಿಕೆ ದಾಖಲಿಸಿಕೊಂಡು ಸಹಿ ಪಡೆಯಿತು. ಮುಡಾದಲ್ಲಿ ಬದಲಿ ನಿವೇಶನ ಪಡೆದ ಪ್ರಕರಣದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನಿರ್ದೇಶನದಂತೆ ಮೈಸೂರು ಲೋಕಾಯುಕ್ತದಲ್ಲಿ ಸೆ.27ರಂದು ಎಫ್ಐಆರ್ ದಾಖಲಾಗಿತ್ತು. ಕೇಸ್ ನಂಬರ್ 11/2024 ಅಡಿ ಎಫ್ಐಆರ್ ದಾಖಲಾಗಿದ್ದು, ಸಿಎಂ ಸಿದ್ದರಾಮಯ್ಯ A1, A2 ಆಗಿ ಸಿಎಂ ಪತ್ನಿ ಪಾರ್ವತಿ, A3 ಸಿಎಂ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ್ ಸ್ವಾಮಿ ಹಾಗೂ ಭೂಮಿ ಮಾರಾಟ ಮಾಡಿದ ದೇವರಾಜು A4 ಆರೋಪಿಯಾಗಿದ್ದಾರೆ. ಕೋರ್ಟ್ ನಿರ್ದೇಶನದಂತೆ ಮೈಸೂರು ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಅಗತ್ಯ ಇದ್ದಲ್ಲಿ ಮತ್ತೊಮ್ಮೆ ವಿಚಾರಣೆಗೆ ಕರೆಯಲಾಗುವುದು ಎಂದು ಇಬ್ಬರಿಗೂ ಅಧಿಕಾರಿಗಳು ಹೇಳಿದರು ಎನ್ನಲಾಗಿದೆ. ಪ್ರಕರಣದ ಮೊದಲ ಇಬ್ಬರು ಆರೋಪಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೂ ಸದ್ಯದಲ್ಲೇ ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ.
Advertisement