
ಮೈಸೂರು: ಕಾಂಗ್ರೆಸ್‌ನವರು ಇಂದು ಪೇಪರ್‌ಗಳಲ್ಲಿ ಅದ್ಯಾವುದೋ ಜಾಹೀರಾತು ಕೊಟ್ಟಿದ್ದಾರೆ. ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ! ಕರ್ನಾಟಕ ರಾಜ್ಯವನ್ನು ವಾಮಾಮಾರ್ಗ, ಮೋಸದಿಂದ ಅಸ್ಥಿರಗೊಳಿಸುತ್ತಿದ್ದಾರೆ ಎಂದು ಜಾಹೀರಾತು ಕೊಟ್ಟಿದ್ದಾರೆ. ಆದರೆ, ವಾಮಾಮಾರ್ಗ, ಮೋಸವನ್ನು ಸ್ಥಿರಗೊಳಿಸಲು ಹೊರಟಿರುವ ಸರ್ಕಾರವಿದು ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದ ಅವರು, ಇವರು ಯಾವತ್ತು ಸತ್ಯ ಹಾಗೂ ಧರ್ಮವನ್ನು ಉಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಹರ್ಷಿ ವಾಲ್ಮೀಕಿ ನಿಗಮದಿಂದ ಬಡವರಿಗೆ ಕೊಡಬೇಕಾದ ಹಣವನ್ನು ನುಂಗಿದ್ದಾರೆ. ಸರ್ಕಾರಕ್ಕೆ ಮೋಸ ಮಾಡಿ ಮುಡಾ ನಿವೇಶನ ತೆಗೆದುಕೊಂಡಿದ್ದಾರೆ. ಬಳಿಕ ಪರಿಸ್ಥಿತಿ ವ್ಯತಿರಿಕ್ತವಾದಾಗ ವಾಪಸ್ ಕೊಟ್ಟಿದ್ದಾರೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗ ಆಗಿದೆ. ಇವರೇ ಆರ್ಥಿಕ ಸಚಿವರು, ಇವರ ಇಲಾಖೆಗೆ ಸಂಬಂಧಪಟ್ಟ ಹಣ ಬಿಡುಗಡೆ ಆಗಿದೆ. ಅದರ ಸತ್ಯಾಂಶಗಳು ಹೊರಬರುವ ಕಾಲ ದೂರವಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಸಿದ್ರಾಮಣ್ಣನ ಬಗ್ಗೆ ಹಿನಕಲ್ ಸಾಕಮ್ಮನ ಕೇಳಿದರೆ ಗೊತ್ತಾಗುತ್ತದೆ. ಯಾವ ವಾಮ ಮಾರ್ಗದಲ್ಲಿ ನಿವೇಶನ ಪಡೆದಿದ್ದಾರೆ ಎಂಬುದು ಗೊತ್ತಾಗುತ್ತದೆ. ಇದೆಲ್ಲ ಇತಿಹಾಸ ಇದೆ ಎಂದರು. ಹಾಗಾಗಿ ಇಲ್ಲಿ ಸ್ಥಿರಗೊಳಿಸುವುದು, ಅಸ್ಥಿರಗೊಳಿಸೊದು ನಮ್ಮ ಕೈಯಲ್ಲಿಲ್ಲ. ಎಲ್ಲ ಚಾಮುಂಡೇಶ್ವರಿ ಅಮ್ಮನ ಕೈಯಲ್ಲಿದೆ ಎಂದು ಹೇಳಿದರು.
ಎಚ್‌ಡಿಕೆ ಕೇವಲ ಆರೋಪ ಮಾಡದೇ ದಾಖಲೆ ನೀಡಲಿ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಎಷ್ಟು ದಾಖಲೆ ಕೊಡಲಿ? ಈಗ ಕೊಟ್ಟಿರುವುದನ್ನೇ ಅವರಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ಮುಖಂಡರೇ ಅ ಬಗ್ಗೆ ಮಾತಾಡುತ್ತಾರೆ ಎಂದರು.
ನಾನು ಮಾಧ್ಯಮದವರ ಎದುರು ತೋರಿಸಿದ್ದ ಪೆನ್‌ಡ್ರೈವ್‌ನಲ್ಲಿ ವರ್ಗಾವಣೆ ದಂಧೆ ಬಗ್ಗೆ ಇತ್ತೇ ಹೊರತು ಅಶ್ಲೀಲ ಚಿತ್ರ ಇರಲಿಲ್ಲ. ನಾನು ಕಮಿಷನ್ ಮಾಡಬೇಕು ಅಂತಿದ್ರೆ ರೈತರ ಸಾಲ ಮನ್ನಾ ಮಾಡಬೇಕಾಗಿರಲಿಲ್ಲ. ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಯಾರಿಗೂ ಒತ್ತಡ ಹಾಕಿ ಕಮಿಷನ್ ಪಡೆದಿಲ್ಲ. ಇದನ್ನೆಲ್ಲಾ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಹೇಳುತ್ತಿದ್ದೇನೆ. ಕಮಿಷನ್ ಪಡೆದಿಲ್ಲ ಎಂದು ತಿಳಿಸಿದರು.
Advertisement