
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದ್ದು, ಈ ಸಂಬಂಧ ಕೆಲವು ದೂರುಗಳನ್ನು ಸ್ವೀಕರಿಸಿದ ನಂತರ ಶುಕ್ರವಾರ ಸಿಇಎನ್ ಪೊಲೀಸ್ ಠಾಣೆಯಲ್ಲಿ (ಕೇಂದ್ರ ವಿಭಾಗ) ಎಫ್‌ಐಆರ್ ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯ ಆಯುಕ್ತರ ಭಾವಚಿತ್ರ, ಹೆಸರು, ಹುದ್ದೆ ಮತ್ತು ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ಫೇಸ್ ಬುಕ್ ಖಾತೆ (https://www.facebook.com/share/72znq6cB8NENELpo/) ತೆರೆಯಲಾಗಿದೆ.
ನಕಲಿ ಫೇಸ್‌ಬುಕ್ ಖಾತೆ ಮೂಲಕ ಪಾಲಿಕೆಯ ಅಧಿಕಾರಿಗಳು, ನೌಕರರು ಹಾಗೂ ಸಾರ್ವಜನಿಕರನ್ನು ವಂಚಿಸುವ ಸಾಧ್ಯತೆಯಿದ್ದು, ಸದರಿ ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡಿ, ಖಾತೆ ತೆರೆದಿರುವ ಅಪರಿಚಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ದೂರು ನೀಡಲಾಗುವುದು ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಅಪರಿಚಿತರ ಸಂಖ್ಯೆಯ ವಾಟ್ಸಾಪ್ ಡಿಪಿಯಲ್ಲಿ ಗಿರಿನಾಥ್ ಅವರ ಚಿತ್ರವನ್ನು ಬಳಸಲಾಗಿತ್ತು. ಇ-ಕಾಮರ್ಸ್ ಕಂಪನಿಗಳಿಂದ ಉಡುಗೊರೆಗಳನ್ನು ಆರ್ಡರ್ ಮಾಡಿ ಅವರಿಗೆ ಕಳುಹಿಸಲು ಅಧಿಕಾರಿಗಳಿಗೆ ಕೇಳಲಾಗಿತ್ತು.
ಈ ವರ್ಷದ ಮೇ ನಲ್ಲಿ ಇಂಜಿನಿಯರ್ ಗಳಿಗೆ ಗುಡ್ ಮಾರ್ನಿಂಗ್ ಎಂಬ ಶುಭಾಶಯ ಕಳುಹಿಸಿ ಎಲ್ಲಿದ್ದೀರಾ ಎಂದು ಅವರನ್ನು ಕೇಳಲಾಗಿತ್ತು. ಈ ಎರಡು ಘಟನೆಗಳಿಗೆ ಸಂಬಂಧಿಸಿದಂತೆ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
Advertisement