ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆ ಅದ್ಧೂರಿಯಿಂದ ನಡೆದಿದ್ದು, 10 ದಿನಗಳ ದಸರಾ, ನವರಾತ್ರಿ ಆಚರಣೆಗೆ ವಿಧ್ಯುಕ್ತ ತೆರೆ ಬಿದ್ದಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪಾರ್ಚನೆ ಮಾಡುವ ಮೂಲಕ, ನಾಡದೇವಿ ಚಾಮುಂಡೇಶ್ವರಿಯನ್ನು ಹೊತ್ತ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಮೆರವಣಿಗೆ ಸಾಗಿದ್ದು, ಬರೊಬ್ಬರಿ 49 ಸ್ತಬ್ದಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಿತ್ತು. ಲಕ್ಷಾಂತರ ಜನರು ದಸರಾ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಅರಮನೆಯಿಂದ ಶುರುವಾದ ಜಂಬೂ ಸವಾರಿ, ಕೆ.ಆರ್.ಸರ್ಕಲ್ , ಆರ್ಯವೇದ ಸರ್ಕಲ್, ತಿಲಕ್ ನಗರ, ಬಂಬೂ ಬಜಾರ್ ಮೂಲಕ ಬನ್ನಿ ಮಂಟಪ್ಪಕ್ಕೆ ತಲುಪಲಿದ್ದು ಸುಮಾರು 4 ರಿಂದ 5 ಕಿಲೋ ಮೀಟರ್ ಮೆರವಣಿಗೆ ನಡೆದಿದೆ. ಜಂಬೂಸವಾರಿ ಮೆರವಣಿಗೆ ನಂತರ ಬನ್ನಿಮಂಟಪದ ಮೈದಾನದಲ್ಲಿ ದಸರಾ ಪಂಜಿನ ಕವಾಯತು ನಡೆದಿದೆ.
ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ೫ನೇ ಹಂತದ ಯೋಜನೆಗೆ ಅ.16ರಂದು ಚಾಲನೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಯಿಂದ ಬೆಂಗಳೂರಿನ 50ಲಕ್ಷ ನಾಗರೀಕರಿಗೆ ಅನುಕೂಲವಾಗಲಿದೆ. ಮನೆ ಮನೆಗೂ ಕಾವೇರಿ ನೀರು ತಲುಪಲಿದೆ ಎಂದು ಡಿಸಿಎಂ ಹೇಳಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಪಾಲು ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಇದೇ ವೇಳೆ ಡಿಸಿಎಂ ಹೇಳಿದ್ದಾರೆ.
ದೇಶಾದ್ಯಂತ ಅಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆಗಳ ಬಂಧನ ಕಾರ್ಯಾಚರಣೆ ಮುಂದುವರಿದಿದ್ದು, ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 9 ಮಂದಿ ಬಾಂಗ್ಲಾದೇಶಿಯರನ್ನು ವಶಕ್ಕೆ ಪಡೆಯಲಾಗಿದೆ. ಮೀನುಗಾರಿಕಾ ಕಾರ್ಮಿಕರಾಗಿ ಉದ್ಯೋಗ ಅರಿಸಿಕೊಂಡು ಬಂದಿದ್ದ ಬಾಂಗ್ಲಾದೇಶೀಯರನ್ನು ಉಡುಪಿ ತಾಲೂಕಿನ ಮಲ್ಪೆ ವಡಬಾಂಡೇಶ್ವರ ಬಸ್ ನಿಲ್ದಾಣ ಬಳಿ ವಶಕ್ಕೆ ಪಡೆಯಲಾಗಿದೆ. ಮೊದಲಿಗೆ ಮಹಮ್ಮದ್ ಮಾಣಿಕ್ ಎಂಬ ವ್ಯಕ್ತಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಲು ಪ್ರಯತ್ನಿಸಿದ್ದ. ಇಮಿಗ್ರಷನ್ ಅಧಿಕಾರಿಗಳ ಪರಿಶೀಲನೆ ವೇಳೆ ಈತ ಬಾಂಗ್ಲಾದೇಶದ ಮಾಣಿಕ್ ಚೌಕ್ ರಾಜಶಾಹಿ ಎಂದು ತಿಳಿದುಬಂದಿತ್ತು. ಬಳಿಕ ಈತನ ವಿಚಾರಣೆ ವೇಳೆ ಇನ್ನೂ ಹಲವರು ಮಲ್ಪೆಯಲ್ಲಿರುವ ಮಾಹಿತಿ ಲಭ್ಯವಾಗಿತ್ತು. ಈ ಆರೋಪಿಗಳು ನಕಲಿ ಭಾರತೀಯ ದಾಖಲಾತಿ ಸೃಷ್ಟಿಸಿ ಉಡುಪಿಗೆ ಪ್ರವೇಶಿಸಿದ್ದರು. ಆರೋಪಿಗಳ ಬಳಿ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ಆರೋಪಿಗಳ ಪೈಕಿ ಸಿಕ್ಕಿಂ ಅಗರ್ತಲಾದ ಕಾಜೋಲ್ ಎಂಬಾತ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದಾನೆಂದು ತಿಳಿದುಬಂದಿದೆ.
ಬೆಂಗಳೂರಿನ ಹಲವೆಡೆ ಇಂದು ಮಧ್ಯಾಹ್ನ ಜಿಟಿಜಿಟಿ ಮಳೆಯಾಗಿದ್ದು, ನಗರದಲ್ಲಿ ಅಕ್ಟೋಬರ್ 17ರವರೆಗೆ ಹಾಗೂ ಮುಂದಿನ 7 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದ ಹವಾಮಾನ ಇಲಾಖೆ ಹೇಳಿದೆ. ಪೂರ್ವ ಅರಬ್ಬೀ ಸಮುದ್ರ ತೀರದಲ್ಲಿ ತೀವ್ರವಾಗಿ ವಾಯುಭಾರ ಕುಸಿತವಾಗಿದ್ದು ಮುಂದಿನ 7 ದಿನಗಳ ಕಾಲ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಲಿದೆ. ಇನ್ನು ಹಾವೇರಿ, ಇಲಕಲ್ ಮತ್ತು ಶಿವಮೊಗ್ಗದಲ್ಲಿ ಹೆಚ್ಚು ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನಲೆಯಲ್ಲಿ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ ಮೂರುದಿನಗಳವರೆಗೆ ಹಲವು ಕಡೆ ಮಳೆ ಸಾಧ್ಯತೆಯಿದೆ.
ಮೈಸೂರು-ದರ್ಭಂಗಾ ಬಾಗಮತಿ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲು ಮಧ್ಯೆ ಚೆನ್ನೈಗೆ ಸಮೀಪವಿರುವ ಕವರೈಪೆಟ್ಟೈ ಬಳಿ ನಡೆದ ಅಪಘಾತದಲ್ಲಿ ಏಳು ಪ್ರಯಾಣಿಕರಿಗೆ ಗಾಯಗಳಾಗಿವೆ. ಅಪಘಾತದ ಹಿನ್ನೆಲೆಯಲ್ಲಿ ಈ ಮಾರ್ಗದ ಒಟ್ಟು 8 ರೈಲುಗಳ ಸಂಚಾರ ಮಾರ್ಗವನ್ನ ಬದಲಿಸಲಾಗಿತ್ತು. ರೈಲ್ವೆ ಇಲಾಖೆ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ಚೆನ್ನೈ-ವಿಜಯವಾಡ, ವಿಜಯವಾಡ-ಚೆನ್ನೈ 2 ರೈಲುಗಳ ಸಂಚಾರವನ್ನ ರದ್ದು ಮಾಡಲಾಗಿತ್ತು. ಘಟನೆಗೆ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
Advertisement