ಡಾ.ರಾಜ್ ಕುಮಾರ್ ಅವರಿಗೆ ಮೊದಲ ಬಾರಿಗೆ ಸಿನಿಮಾದಲ್ಲಿ ಹಾಡುವಂತೆ ಹೇಳಿದ್ದೇ ನಾನು: ಇಳಯರಾಜಾ
ಮೈಸೂರು: ಕನ್ನಡದ ಮೇರುನಟ ಡಾ ರಾಜ್ ಕುಮಾರ್ ಅವರನ್ನು ಚಿತ್ರವೊಂದಕ್ಕೆ ಮೊದಲ ಬಾರಿಗೆ ಹಾಡಿಸುವಂತೆ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರಿಗೆ ಹೇಳಿದ್ದು ನಾನೇ ಎಂಬ ವಿಷಯವನ್ನು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಇಳಯರಾಜ ಹೇಳಿದ್ದಾರೆ.
ಇಳಯರಾಜ ಅವರು ದಸರಾ ಮ್ಯೂಸಿಕಲ್ ನೈಟ್‌ನಲ್ಲಿ ಪ್ರದರ್ಶನ ನೀಡಲು ಬಂದಿದ್ದರು. ಈ ವೇಳೆ ತುಂಬಿದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿ ಕೆ ವೆಂಕಟೇಶ್ ಅವರು 1974 ರಲ್ಲಿ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ ಹಾಡಲು ಪಿಬಿ ಶ್ರೀನಿವಾಸ್ ಅಥವಾ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಆದ್ಯತೆ ನೀಡಿದ್ದರು. ಆಗ ನಾನು ಯಾರಾದರೂ ಹೊಸಬರಿಗೆ ಈ ಬಾರಿ ಅವಕಾಶ ನೀಡೋಣ, ಇದಕ್ಕೆ ಹೊಸಬರು ಹಾಡಿದರೆ ಒಳ್ಳೆಯದು ಎಂದೆ.
ರಾಜ್ ಕುಮಾರ್ ಅವರೇ ಯಾಕೆ ಹಾಡಬಾರದು ಎಂದೆ. ಆದರೆ ಪಿ ಬಿ ಶ್ರೀನಿವಾಸ್ ಅವರ ಜೀವನದ ಆಧಾರವಾಗಿದ್ದ ಗಾಯನವನ್ನು ಕಸಿದುಕೊಳ್ಳಲು ರಾಜ್ ಕುಮಾರ್ ಅವರಿಗೆ ಇಷ್ಟವಿಲ್ಲದೆ ಆರಂಭದಲ್ಲಿ ಒಪ್ಪಲಿಲ್ಲ, ಕೊನೆಗೆ ನಾನು ಒತ್ತಾಯ ಮಾಡಿದ್ದರಿಂದ ಒಪ್ಪಿಕೊಂಡರು. ನನ್ನ ಒತ್ತಾಯದ ಮೇರೆಗೆ ರಾಜ್ ಕುಮಾರ್ ಮೊದಲ ಬಾರಿಗೆ 1974 ರಲ್ಲಿ ಸಂಪತ್ತಿಗೆ ಸವಾಲ್ ಚಿತ್ರಕ್ಕೆ ಮೊದಲ ಸಲ ಹಾಡಿದರು. ಮೊದಲ ಹಾಡೇ ಹಿಟ್ ಆಯಿತು. ವಿನಯವಂತ ಗುಣ ಹೊಂದಿದ್ದ ರಾಜ್ ಕುಮಾರ್ ಅವರಿಗೆ ವೃತ್ತಿಯಲ್ಲಿ ಗಾಯಕರಾಗಿದ್ದ ಶ್ರೀನಿವಾಸ್ ಅವರ ಮನಸ್ಸಿಗೆ ನೋವು ಮಾಡುವುದು ಇಷ್ಟವಿರಲಿಲ್ಲ ಎಂದು ನೆನಪಿಸಿಕೊಂಡರು ಇಳಯರಾಜಾ.
ಕೊಲ್ಲೂರು ಮೂಕಾಂಬಿಕಾ ಭಕ್ತಿಗೀತೆಯೊಂದಿಗೆ ತಮ್ಮ ಕಾರ್ಯಕ್ರಮ ಆರಂಭಿಸಿದ ಇಳಯರಾಜಾ ಗೀತಾ, ನಮ್ಮೂರ ಮಂದಾರ ಹೂವೆ ಮತ್ತು ತಮ್ಮ ಚಿತ್ರದ ಕೆಲವು ಹಿಟ್ ಹಾಡುಗಳನ್ನು ಹಾಡಿದರು.
1973 ರಲ್ಲಿ ಮೈಸೂರಿನ ಟೌನ್ ಹಾಲ್‌ನಲ್ಲಿ ಪಿಬಿ ಶ್ರೀನಿವಾಸ್, ಸುಶೀಲಾ, ಜಾನಕಿ ಮತ್ತು ಇತರರೊಂದಿಗೆ ಪೂರ್ಣ ಪ್ರಮಾಣದ ಆರ್ಕೆಸ್ಟ್ರಾದಲ್ಲಿ ಕೀಬೋರ್ಡ್ ವಾದಕನಾಗಿದ್ದೆ ಎಂದರು. ಇಂದು ನವರಾತ್ರಿ ಉತ್ಸವದಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾರ್ಯಕ್ರಮ ನೀಡಲು ಚಾಮುಂಡೇಶ್ವರಿ ದೇವಿ ನನ್ನನ್ನು ಕರೆದಿರುವುದು ಸಂತಸ ತಂದಿದೆ ಎಂದರು.
ತಮ್ಮ ಹಾಡುಗಳು ಹಿಟ್ ಆದ ಕನ್ನಡ ಚಲನಚಿತ್ರಗಳಿಗೆ ಹೇಗೆ ಟ್ಯೂನ್‌ಗಳನ್ನು ಸಂಯೋಜಿಸಿದರು ಎಂಬುದನ್ನು ವಿವರಿಸಿದರು. ಇಳಯರಾಜ ಕನ್ನಡದ ಹಿಟ್ ಹಾಡುಗಳನ್ನು ಹಾಡಿದ್ದು ಮಾತ್ರವಲ್ಲದೆ, ಗೋಷ್ಠಿಯಲ್ಲಿ ಕನ್ನಡದಲ್ಲಿ ಮಾತನಾಡಿದ್ದಾರೆ.
ತಮಿಳಿನ ಹಿಟ್ ಹಾಡುಗಳನ್ನು ಹಾಡದಿರುವುದಕ್ಕೆ ಇಂದು ಕ್ಷಮೆಯಿರಲಿ ಏಕೆಂದರೆ ಇದು ದಸರಾ ಕಾರ್ಯಕ್ರಮ ಮತ್ತು ಕರ್ನಾಟಕದ ಕನ್ನಡದ ಕಾರ್ಯಕ್ರಮ ಎಂದು ಕನ್ನಡ ಪ್ರೀತಿ ಮೆರೆದರು.
ಹೊಟೇಲ್‌ನಲ್ಲಿ ಭಾವಚಿತ್ರ ನೀಡಿ ಗೌರವಿಸಿದ ಅಭಿಮಾನಿಗಳನ್ನು ಭೇಟಿ ಮಾಡಿದರು. ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಮೈಸೂರು ನಗರದ ದೇವಾಲಯವೊಂದಕ್ಕೆ ಭೇಟಿ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ