ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ, ರಾಜಕಾಲುವೆ ಅತಿಕ್ರಮಣ: ಅಧಿಕಾರಿಗಳಿಗೆ NGT ನೋಟಿಸ್ ಜಾರಿ
ನವದೆಹಲಿ: ಬೆಂಗಳೂರಿನ ಎರಡು ಕೆರೆಗಳ ಒತ್ತುವರಿ ಮತ್ತು ಕೆರೆಗೆ ನೀರು ಹರಿದುಬರುವ ರಾಜಕಾಲುವೆ ಮುಚ್ಚಿರುವ ಬಗ್ಗೆ ಲೋಕಾಯುಕ್ತ ವರದಿ ಕುರಿತು ಬಿಬಿಎಂಪಿ ಮತ್ತಿತರ ಅಧಿಕಾರಿಗಳಿಂದ ಎನ್‌ಜಿಟಿ ಪ್ರತಿಕ್ರಿಯೆ ಕೇಳಿದೆ.
ವಿಭೂತಿಪುರ ಮತ್ತು ದೊಡ್ಡನೆಕುಂದಿ ಕೆರೆಗಳಲ್ಲಿನ ಹಲವು ಸಮಸ್ಯೆಗಳ ಕುರಿತು ಲೋಕಾಯುಕ್ತ ತನಿಖೆಗೆ ಸಂಬಂಧಿಸಿದ ಪತ್ರಿಕೆಯೊಂದರ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ದೂರನ್ನಾಗಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದೆ.
ವಿಭೂತಿಪುರ ಕೆರೆಯಲ್ಲಿನ ಪ್ರವೇಶ ದ್ವಾರವನ್ನು ವಿರೂಪಗೊಳಿಸಿರುವುದು, ತಂತಿ ಬೇಲಿಗಳನ್ನು ಧ್ವಂಸಗೊಳಿಸಿರುವುದು ಮತ್ತು ಅಕ್ರಮ ಕಟ್ಟಡ ತಲೆ ಎತ್ತಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರನ್ನೊಳಗೊಂಡ ಪೀಠ ಇತ್ತೀಚಿನ ಆದೇಶದಲ್ಲಿ ಹೇಳಿತು.
ಮಳೆಗಾಲದಲ್ಲಿಯೂ ಸಹ ಕೆರೆಯ ನೀರಿನ ಮಟ್ಟ ಆತಂಕಕಾರಿಯಾಗಿ ಕಡಿಮೆಯಾಗಿದೆ. ಹೊರಹರಿವಿನ ಮಾರ್ಗವನ್ನು ನಿರ್ಬಂಧಿಸಲಾಗಿದೆ. ಅತಿಕ್ರಮಣ ಮತ್ತು ಸೌಲಭ್ಯಗಳ ದುರುಪಯೋಗ ಕಂಡುಬಂದಿದೆ. ಇದಲ್ಲದೆ ದೊಡ್ಡನೆಕುಂದಿ ಕೆರೆಯು ಇದೇ ರೀತಿಯ ಸಮಸ್ಯೆ ಎದುರಿಸುತ್ತಿದೆ ಎಂದು ಅವರು ಹೇಳಿದರು.
ಸುದ್ದಿಯು ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ ಮತ್ತು ಪರಿಸರ (ರಕ್ಷಣೆ) ಕಾಯ್ದೆಯ ನಿಬಂಧನೆ ಪಾಲನೆಗೆ ಸಂಬಂಧಿಸಿದಂತೆ ಗಣನೀಯ ಸಮಸ್ಯೆಗಳನ್ನು ಎತ್ತುತ್ತದೆ ಎಂದು ನ್ಯಾಯಾಂಗ ಸದಸ್ಯರಾದ ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಮತ್ತು ತಜ್ಞ ಸದಸ್ಯ ಎ ಸೆಂಥಿಲ್ ವೇಲ್ ಅವರನ್ನೊಳಗೊಂಡ ಪೀಠ ಹೇಳಿತು.
ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗಳು ಮತ್ತು ಬೆಂಗಳೂರಿನ ಜಿಲ್ಲಾಧಿಕಾರಿ ಅವರನ್ನು ಪ್ರತಿವಾದಿಗಳು ಮತ್ತು ಕಕ್ಷಿದಾರರನ್ನಾಗಿ ಹಸಿರು ಮಂಡಳಿ ಸೂಚಿಸಿತು.
ಜಿಲ್ಲಾಧಿಕಾರಿ ವರ ವಕೀಲರು ನೋಟಿಸ್ ಸ್ವೀಕರಿಸಿದ್ದು, ಉತ್ತರ ಸಲ್ಲಿಸಲು ಸಮಯ ಕೇಳಿದ್ದಾರೆ. ಮುಂದಿನ ವಿಚಾರಣೆಯ (ನವೆಂಬರ್ 5) ಒಂದು ವಾರಕ್ಕೂ ಮುನ್ನಾ ಚೆನ್ನೈನಲ್ಲಿರುವ ನ್ಯಾಯಮಂಡಳಿಯ ದಕ್ಷಿಣ ವಲಯ ಪೀಠದ ಮುಂದೆ ತಮ್ಮ ಪ್ರತಿಕ್ರಿಯೆಯ ಅಫಿಡವಿಟ್ ಮೂಲಕ ಸಲ್ಲಿಸಲು ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ನ್ಯಾಯ ಪೀಠ ಆದೇಶಿಸಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ