ಬಸ್ ಚಾಲನೆ ಮಾಡುವಾಗ ಬೀಡಿ ಸೇದಿದ ಚಾಲಕ: ವಿಡಿಯೊ ವೈರಲ್, ಕ್ರಮಕ್ಕೆ ಆಗ್ರಹ
ಕೊಪ್ಪಳ: ಬಸ್ ಚಲಾಯಿಸುತ್ತಿರುವಾಗ ಬೀಡಿ ಸೇದಿ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಾಲಕನ ಹಿಂದೆ ಕುಳಿತಿದ್ದ ಯುವ ಪ್ರಯಾಣಿಕ ಚಾಲಕನ ವಿಡಿಯೊ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ವೈರಲ್ ಆಗಿ ಸಮಸ್ಯೆಗೆ ಸಿಲುಕಿದ್ದಾರೆ.
ಕೆಎಸ್‌ಆರ್‌ಟಿಸಿ ನಿಯಮಗಳನ್ನು ಚಾಲಕ ಉಲ್ಲಂಘಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸರ್ಕಾರದ ನಿಯಮ ಪ್ರಕಾರ ಬಸ್ ಚಾಲನೆ ಮಾಡುವಾಗ ತಂಬಾಕು ಸೇವನೆ, ಯಾವುದೇ ತಂಬಾಕು ಆಧಾರಿತ ಮಸಾಲಾ ಸೇವನೆ ಮಾಡುವುದು, ಬೀಡಿ-ಸಿಗರೇಟ್ ಎಳೆಯುವುದು ಕಾನೂನಿಗೆ ವಿರುದ್ಧವಾಗಿರುತ್ತದೆ. ಹೀಗೆ ಚಾಲಕ ಬೀಡಿ ಎಳೆಯುತ್ತಿರುವಾಗ ಬಸ್ ಗಂಗಾವತಿಯಿಂದ ಕೊಲ್ಲಾಪುರಕ್ಕೆ ತೆರಳುತ್ತಿತ್ತು. ಕೆಎ 23 ಎಫ್ 1045 ನೋಂದಣಿ ಸಂಖ್ಯೆಯ ಬಸ್ ಕೆಎಸ್‌ಆರ್‌ಟಿಸಿ ನಿಪ್ಪಾಣಿ ಡಿಪೊಗೆ ಸೇರಿದೆ.
ಚಾಲಕ ಒಂದು ಕೈಯಿಂದ ಬೀಡಿ ಸೇದುತ್ತಿದ್ದು, ಇನ್ನೊಂದು ಕೈಯನ್ನು ಸ್ಟೀರಿಂಗ್ ಮೇಲೆ ಕೈ ಇಟ್ಟು ಬಸ್ ಚಲಾಯಿಸುತ್ತಿದ್ದ. ಬಸ್ ನಲ್ಲಿ ನೂರಾರು ಪ್ರಯಾಣಿಕರಿದ್ದು ಅವರನ್ನು ಸುರಕ್ಷಿತವಾಗಿ ಅವರ ಸ್ಥಳಗಳಿಗೆ ಸಾಗಿಸುವ ಜವಾಬ್ದಾರಿ ಚಾಲಕನ ಮೇಲಿದೆ ಎಂದು ಕೆಲವು ಪ್ರಯಾಣಿಕರು ಕೊಪ್ಪಳ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಬೀಡಿ ಸೇದುವ ಚಾಲಕರು ವಾಹನ ಚಲಾಯಿಸುವಾಗ ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ನಿಯಮ ಉಲ್ಲಂಘಿಸಿ ಮಕ್ಕಳು, ಮಹಿಳೆಯರು ಹಾಗೂ ಇತರ ಪ್ರಯಾಣಿಕರ ಸಮ್ಮುಖದಲ್ಲಿ ಧೂಮಪಾನ ಮಾಡುವ ಚಾಲಕರನ್ನು ಅಮಾನತುಗೊಳಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ಬಸ್ಸಿನೊಳಗೆ ಬೀಡಿ ಹೊಗೆ ಹರಡಿದರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗದಗ ಕೆಎಸ್‌ಆರ್‌ಟಿಸಿಯ ಅಧಿಕಾರಿ, ನಮಗೆ ಕೆಲವು ದೂರುಗಳು ಬಂದಿವೆ. ಚಾಲಕ ವಾಹನ ಚಲಾಯಿಸುವಾಗ ಬೀಡಿ ಸೇದುತ್ತಿರುವ ವೀಡಿಯೊವನ್ನು ನೋಡಿದ್ದೇವೆ ಈ ಬಗ್ಗೆ ಹೆಚ್ಚಿನ ವಿವರಗಳು ಸಿಕ್ಕಿಲ್ಲ. ಈ ಘಟನೆ ನಿಖರವಾಗಿ ಎಲ್ಲಿ ಸಂಭವಿಸಿದೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ, ಚಾಲಕನನ್ನು ಗುರುತಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ವಿಚಾರಣೆಯನ್ನು ಪ್ರಾರಂಭಿಸುತ್ತೇವೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ