ಬೆಂಗಳೂರು: ವಾಲ್ಮೀಕಿ ನಿಗಮದ ಅನುದಾನ ಕಡಿತಗೊಳಿಸದಂತೆ ಹಲವು ಮನವಿಗಳು ಬಂದಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಈ ವರ್ಷ ವಾಲ್ಮೀಕಿ ನಿಗಮಕ್ಕೆ ಮೀಸಲಿಟ್ಟಿರುವ ಅನುದಾನವನ್ನು ಸಂಪೂರ್ಣವಾಗಿ ನೀಡುವಂತೆ ಸೂಚಿಸಿದ್ದೇನೆ. 'ಪರಿಶಿಷ್ಟ ಪಂಗಡದ ಶಾಸಕರು ಹಾಗೂ ಸ್ವಾಮೀಜಿಗಳ ಜತೆಗಿನ ಸಭೆಯಲ್ಲಿ ಎರಡು ವಿಷಯಗಳ ಬಗ್ಗೆ ಚರ್ಚೆಯಾಗಿದೆ. ಮೊದಲು ಅನುದಾನ ಕಡಿತ ಮಾಡದಂತೆ ಶಾಸಕರು ಹಾಗೂ ಸ್ವಾಮೀಜಿಗಳು ಮನವಿ ಮಾಡಿದ್ದರು. ಎರಡನೆಯದ್ದು ನಕಲಿ ಜಾತಿ ಪ್ರಮಾಣ ಪತ್ರ ಸಮಸ್ಯೆ ಕುರಿತೆ ಚರ್ಚೆ ನಡೆದಿದ್ದು ಗೊಂದಲ ನಿವಾರಣೆ ಮಾಡುವ ಕೆಲಸ ಮಾಡುತ್ತೇವೆ ಎಂದರು.
ಇನ್ನು ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ಕುರಿತಂತೆ ಎಸ್ಐಟಿ ತನಿಖೆ ನಡೆಸುತ್ತಿದೆ. ದುರುಪಯೋಗ ಆಗಿರುವುದರಿಂದ 89.63 ಕೋಟಿ ರೂ.ಗಳಲ್ಲಿ 5 ಕೋಟಿ ರೂ. ವಾಪಸ್ ಬಂದಿದೆ. ಎಸ್‌ಐಟಿ ರೂ.71.54 ಕೋಟಿ ರೂಪಾಯಿ ಹಿಂಪಡೆದಿದೆ. ಇನ್ನು ಉಳಿದ 13 ಕೋಟಿ ರೂ. ವಸೂಲಿಯಾಗಬೇಕಿದೆ. ಉಳಿದ ಮೊತ್ತವನ್ನು ವಸೂಲಿ ಮಾಡಲಾಗುತ್ತದೆ. ಈ ಪ್ರಕರಣವು ಪ್ರಸ್ತುತ ನ್ಯಾಯಾಲಯದ ಮುಂದಿದೆ. ನಾವು ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತೇವೆ. ನಾನು ಜಾತಿ ಪ್ರಮಾಣಪತ್ರದ ಬಗ್ಗೆ ಗೊಂದಲವನ್ನು ಪರಿಹರಿಸಿ ಅಗತ್ಯ ಆದೇಶಗಳನ್ನು ಹೊರಡಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಕಡಿಮೆ ಅನುದಾನ ನೀಡುತ್ತಿರುವ ಕೇಂದ್ರದ ಅನ್ಯಾಯದ ವಿರುದ್ಧ ಪ್ರತಿಭಟನೆಗೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಈ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ವಿಚಾರ ಸದ್ಯಕ್ಕೆ ತೀರ್ಮಾನ ಮಾಡಿಲ್ಲ, ಪ್ರತಿಭಟನೆ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಸಿದ್ದರಾಮಯ್ಯ ಅವರು ಉಪಚುನಾವಣೆಗೆ ಸಿದ್ಧರಿದ್ದು, ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಹೇಳಿದರು.
Advertisement