ಕಾವೇರಿ 5 ನೇ ಹಂತದ ನೀರಿನ ಯೋಜನೆಗೆ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಬುಧವಾರ ಚಾಲನೆ ನೀಡಿದರು. ಈ ಯೋಜನೆಯ ಮೂಲಕ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆಯಾಗಲಿದೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, 'ಈ ಬಹು ನಿರೀಕ್ಷಿತ ಕಾವೇರಿ 5ನೇ ಹಂತದ ಯೋಜನೆಯಿಂದ ಬೆಂಗಳೂರಿನ ಮೂರನೇ ಒಂದು ಭಾಗದಷ್ಟು ನೀರು ಸಿಗುತ್ತದೆ. ಮುಂದಿನ 10 ವರ್ಷಗಳವರೆಗೆ ಯಾವುದೇ ಸಮಸ್ಯೆ ಇಲ್ಲ. 50 ಲಕ್ಷ ಜನಸಂಖ್ಯೆಗೆ ನೀರು ಬರಲಿದೆ. ಈ ಯೋಜನೆಗಾಗಿ ಸುಮಾರು 5000 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ನಾನು ಏನು ಭರವಸೆ ನೀಡಿದ್ದೆನೋ ಅದನ್ನು ಬೆಂಗಳೂರಿನ ಜನರಿಗೆ ತಲುಪಿಸಿದ್ದೇನೆ, ಈ ಯೋಜನೆಯ ಮುಂದಿನ ಹಂತ ಅಂದರೆ ಕಾವೇರಿ 6ನೇ ಹಂತಕ್ಕೂ ಡಿಪಿಆರ್ ಸಿದ್ಧವಾಗಿದೆ ಎಂದು ತಿಳಿಸಿದರು.
MUDA ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಲೆದಂಡವಾಗಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಆಪ್ತ ಕೆ.ಮರಿಗೌಡ ರಾಜೀನಾಮೆ ನೀಡಿದ್ದಾರೆ. ಸಿಎಂ ಸೂಚನೆ ಹಿನ್ನೆಲೆ ವಿಕಾಸಸೌಧದಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ಗೆ ಮರಿಗೌಡ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ವಿಚಾರವಾಗಿ ಇಂದು ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಮುಡಾ ಅಧ್ಯಕ್ಷ ಕೆ.ಮರಿಗೌಡ ಭೇಟಿ ಮಾಡಿದ್ದರು. ಮರಿ ಗೌಡ ರಾಜೀನಾಮೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನಿಮ್ಮಲ್ಲಿ ಕಿಂಚಿತ್ತೂ ನೈತಿಕತೆ ಉಳಿದಿದ್ದರೆ ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿರುವ ಸಂಬಿತ್ ಪಾತ್ರ ಮರಿಗೌಡ ರಾಜೀನಾಮೆ ಮತ್ತು ಮುಡಾ ನಿವೇಶನಗಳನ್ನು ಹಿಂದಿರುಗಿಸಿರುವುದು ಸಿಎಂ ‘ಅಡಿಯಿಂದ ಮುಡಿವರೆಗು ಹಗರಣದಲ್ಲಿ ಮುಳುಗಿದ್ದಾರೆ’ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದ್ದಾರೆ.
ವಾಯುಭಾರ ಕುಸಿತದಿಂದಾಗಿ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರು ಕೆರೆಯಂತಾಗಿದೆ. ಧಾರಾಕಾರ ಮಳೆಗೆ ಪ್ರವಾಹಪೀಡಿತ ಪ್ರದೇಶದಂತಾಗಿರುವ ಭಾರತದ ಪ್ರಮುಖ ಟೆಕ್ ಹಬ್ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಇದೀಗ ಭೂ ಕುಸಿತ ಭೀತಿ ಆವರಿಸಿದೆ. ಮಾನ್ಯತಾ ಟೆಕ್ ಪಾರ್ಕ್ ಆವರಣದ ಮುಂಭಾಗದಲ್ಲಿರುವ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಲ್ಲಿ ಮಣ್ಣು ಕುಸಿತ ಸಂಭವಿಸಿ ಬೃಹತ್ ಮರವೊಂದು ಆವರಣದ ಒಳಗೆ ಬಿದ್ದಿದೆ. ಅಲ್ಲದೆ ಇಲ್ಲಿ ಕೃತಕ ಜಲಪಾತ ಕೂಡ ಸೃಷ್ಟಿಯಾಗಿತ್ತು. ತಾತ್ಕಾಲಿಕ ಶೆಡ್ ಕುಸಿಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಅದೃಷ್ಟವಶಾತ್ ಇಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಲ್ಲದೆ, ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಮತ್ತೊಮ್ಮೆ ಜಲಾವೃತಗೊಂಡಿದ್ದು, ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಪಾರ್ಟ್ಮೆಂಟ್‌ಗೆ ಭೇಟಿ ನೀಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಿವಾಸಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಎರಡು ಟ್ರ್ಯಾಕ್ಟರ್ ವ್ಯವಸ್ಥೆ ಮಾಡಲಾಗಿದೆ. ಭಾರಿ ಮಳೆಗೆ ಹಳಿಗಳು ಜಲಾವೃತವಾಗಿರುವುದರಿಂದ ನೈರುತ್ಯ ರೈಲ್ವೆ ಬುಧವಾರ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಚೆನ್ನೈ-ಬೆಂಗಳೂರು, ಮೈಸೂರು-ಚೆನ್ನೈ, ಚಾಮರಾಜನಗರ-ಮೈಸೂರು, ಮೈಸೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರ ರದ್ದಾಗಿದೆ.
ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರ್ ಆರ್ ನಗರ ಶಾಸಕ ಮುನಿರತ್ನ ಇಂದು ಬಿಡುಗಡೆಯಾದರು. ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮುನಿರತ್ನ ಅವರಿಗೆ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿತ್ತು. ವಾಲ್ಮೀಕಿ ನಿಗಮದಲ್ಲಿನ ಹಣ ದುರ್ಬಳಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ನಾಗೇಂದ್ರ ಸಹ ಇಂದು ಜೈಲಿನಿಂದ ಬಿಡುಗಡೆಯಾಗಿದ್ದು, ವಾಲ್ಮೀಕಿ ನಿಗಮ ಹಗರಣದಲ್ಲಿ ನನ್ನಿಂದ ಯಾವುದೇ ತಪ್ಪು ನಡೆದಿಲ್ಲ, ಆದರೂ ನನ್ನನ್ನು ಬಂಧಿಸಿ ಇಡಿ ಅಧಿಕಾರಿಗಳು 3 ತಿಂಗಳ ಕಾಲ ಕಿರುಕುಳ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಹೆಸರು ಹೇಳುವಂತೆ ಕಿರುಕುಳ ನೀಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರ ಒತ್ತಡದಿಂದ ಹೀಗೆ ಮಾಡಿದ್ದಾರೆ ಇದು ಬ್ಯಾಂಕ್ ಮತ್ತು ಬ್ಯಾಂಕ್ ಅಧಿಕಾರಿಗಳಿಂದ ಆಗಿರುವ ಹಗರಣ. ವಿನಾಕಾರಣ ನಮ್ಮ ಸರ್ಕಾರವನ್ನು ಸಿಲುಕಿಸುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
Advertisement