ಇದೇನಾ ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡುವ ಪರಿ? ಬೀದಿಗೆ ಬಂತು ಕಾಂಗ್ರೆಸ್ ಸರ್ಕಾರದ ಬಂಡವಾಳ: ಅಶೋಕ್

ಸ್ಕೈ ಡೆಕ್ ನಿರ್ಮಿಸುತ್ತೇನೆ, ಟನಲ್ ರಸ್ತೆ ನಿರ್ಮಿಸುತ್ತೇನೆ ಎಂದು ಅಂಗೈಯಲ್ಲೇ ಅರಮನೆ ತೋರಿಸುತ್ತಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅಲ್ಲೊಂದು ಇಲ್ಲೊಂದು ಗುಂಡಿ ಮುಚ್ಚಿ ಬಿಟ್ಟಿ ಪ್ರಚಾರಕ್ಕೆ ಪೋಸ್ ಕೊಡುವುದು ಬಿಟ್ಟರೆ ಕಳೆದ 15 ತಿಂಗಳಿಂದ ಸಾಧಿಸಿದ್ದು ದೊಡ್ಡ ಶೂನ್ಯ ಎಂದು ಲೇವಡಿ ಮಾಡಿದ್ದಾರೆ.
R Ashok
ಆರ್. ಅಶೋಕ್
Updated on

ಬೆಂಗಳೂರು: ಒಂದೇ ಮಳೆಗೆ ಬೆಂಗಳೂರಿನ ತುಂಬಾ ಬಾಯ್ತೆರೆದಿರುವ ಯಮಸ್ವರೂಪಿ ರಸ್ತೆ ಗುಂಡಿಗಳು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಸಲಿಯತ್ತು ಏನು ಎಂಬುದನ್ನ ಬಟಾ ಬಯಲು ಮಾಡಿದೆ. ಬ್ರ್ಯಾಂಡ್ ಬೆಂಗಳೂರಿನ ಮುಖವಾಡ ಕಳಚಿ ಬಿದ್ದಿದ್ದು, ಕಾಂಗ್ರೆಸ್ ಸರ್ಕಾರದ ಬಂಡವಾಳ ಬೀದಿಗೆ ಬಂದಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಶೇ. 40ರಷ್ಟು ಕಮಿಷನ್ ಸರ್ಕಾರ ಅಂತ ಸುಳ್ಳು, ಅಪಪ್ರಚಾರದ ಮೂಲಕ ಕನ್ನಡಿಗರಿಗೆ ಟೋಪಿ ಹಾಕಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ, ತನ್ನ ಭ್ರಷ್ಟಾಚಾರದ ಹಸಿವು, ದಾಹ ನೀಗಿಸಿಕೊಳ್ಳಲು ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರವನ್ನ ಬಲಿ ಕೊಡುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ರಾಜಧಾನಿಯ ರಸ್ತೆಗಳು ಕೆರೆಗಳಾಗಿವೆ, ಬಡಾವಣೆಗಳು ಜಲಾವೃತವಾಗಿವೆ. ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಲೂಟಿ ಹೊಡೆದು, ಸಿಲಿಕಾನ್ ಸಿಟಿ ಜನರನ್ನು ಮಳೆ ನೀರಲ್ಲಿ ಮುಳುಗಿಸಿ, ಬೆಂಗಳೂರಿನ ಮರ್ಯಾದೆ ಹರಾಜು ಹಾಕಿದ್ದೀರಲ್ಲ, ಇದೇನಾ ತಾವುಗಳು ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡುವ ಪರಿ? ಎಂದು ಪ್ರಶ್ನಿಸಿದ್ದಾರೆ.

ಒಂದೇ ಒಂದು ರಸ್ತೆಗುಂಡಿ ಮುಚ್ಚಲು ಕೈಲಾಗದಷ್ಟು ಅಸಮರ್ಥ ಅಯೋಗ್ಯ ಕಾಂಗ್ರೆಸ್ ಸರ್ಕಾರದಿಂದ ಬ್ರ್ಯಾಂಡ್‌ ಬೆಂಗಳೂರು ಹೋಗಿ "ಗುಂಡಿ ಬೆಂಗಳೂರು" ಆಗಿ ಪರಿವರ್ತನೆಗೊಂಡಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಮೀಸಲಿಡದೆ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ರಸ್ತೆಗಳ ಗುಂಡಿ ಮುಚ್ಚಲು ಹೆಣಗಾಡುತ್ತಿದೆ. ಸ್ಕೈ ಡೆಕ್ ನಿರ್ಮಿಸುತ್ತೇನೆ, ಟನಲ್ ರಸ್ತೆ ನಿರ್ಮಿಸುತ್ತೇನೆ ಎಂದು ಅಂಗೈಯಲ್ಲೇ ಅರಮನೆ ತೋರಿಸುತ್ತಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅಲ್ಲೊಂದು ಇಲ್ಲೊಂದು ಗುಂಡಿ ಮುಚ್ಚಿ ಬಿಟ್ಟಿ ಪ್ರಚಾರಕ್ಕೆ ಪೋಸ್ ಕೊಡುವುದು ಬಿಟ್ಟರೆ ಕಳೆದ 15 ತಿಂಗಳಿಂದ ಸಾಧಿಸಿದ್ದು ದೊಡ್ಡ ಶೂನ್ಯ ಎಂದು ಲೇವಡಿ ಮಾಡಿದ್ದಾರೆ.

R Ashok
ವಿಪಕ್ಷ ನಾಯಕ ಆರ್ ಅಶೋಕ್ ಅವರ ಭೂ ವಂಚನೆ ಹಗರಣ ಬಿಚ್ಚಿಟ್ಟ ಗೃಹ ಸಚಿವ ಜಿ.ಪರಮೇಶ್ವರ್

ರಾಜಧಾನಿಯ ಯಾವುದೇ ರಸ್ತೆಗಳಿಗೂ ಹೋದರೂ ನೂರಾರು ಗುಂಡಿಗಳು ಕಾಣುತ್ತಿವೆ. ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡಬೇಕಾದ ದುಸ್ಥಿತಿಯನ್ನ ಕಾಂಗ್ರೆಸ್ ಸರ್ಕಾರ ತಂದಿಟ್ಟಿದೆ. ಜನಸಾಮಾನ್ಯರು, ವಾಹನ ಸವಾರರು ದಿನನಿತ್ಯ ಛೀ, ಥೂ ಎಂದು ಸರ್ಕಾರಕ್ಕೆ ಉಗಿಯುತ್ತಿದ್ದರೂ ದಪ್ಪ ಚರ್ಮದ ಸರ್ಕಾರ ಮಾತ್ರ ತನ್ನ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿರುವುದು ರಾಜ್ಯದ ದುರಂತ. ರಸ್ತೆ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ಭ್ರಷ್ಟ ಕಾಂಗ್ರೆಸ್ ಸರ್ಕಾರ ಯಾವ ಪುರುಷಾರ್ಥಕ್ಕಾಗಿ ಅಧಿಕಾರದಲ್ಲಿದೆ? ಎಂದು ಅಶೋಕ್ ತಪರಾಕಿ ಹಾಕಿದ್ದಾರೆ.

ಗಾರ್ಡನ್‌ ಸಿಟಿ, ಗ್ರೀನ್‌, ಸಿಟಿ, ಐಟಿ ಸಿಟಿ, ಸ್ಟಾರ್ಟಪ್‌ ಸಿಟಿ, ಸಿಲಿಕಾನ್‌ ಸಿಟಿ ಎಂದು ಖ್ಯಾತಿ ಹೊಂದಿದ್ದ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು, ಕಾಂಗ್ರೆಸ್ ಸರ್ಕಾರದ ವಕ್ರದೃಷ್ಟಿಯಿಂದ ರಸ್ತೆ ಗುಂಡಿಗಳ ನಗರ, ವಾಟರ್ ಫಾಲ್ಸ್ ನಗರ ಎಂದು ನಗೆಪಾಟಲಿಗೆ ಈಡಾಗಿದೆ. ಬೆಂಗಳೂರಿಗೆ ಈ ಕುಖ್ಯಾತಿ ತಂದುಕೊಡಲು ಸನ್ಮಾನ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕಳೆದೊಂದು ವರ್ಷದಿಂದ ಅವಿರತವಾಗಿ ಶ್ರಮಿಸಿದ್ದಾರೆ.

ಇಷ್ಟಕ್ಕೂ ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ? ಕಾಂಗ್ರೆಸ್ ಸರ್ಕಾರ ಕಳೆದ 15 ತಿಂಗಳ ಆಡಳಿತದಲ್ಲಿ ಬೆಂಗಳೂರಿಗೆ ಬಿಡಿಗಾಸು ಅನುದಾನ ಸಹ ನೀಡಿಲ್ಲ. ಬೆಂಗಳೂರಿನ ಜನತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಏಳುವ ಮುನ್ನ, ರಸ್ತೆ ಗುಂಡಿಗಳಿಂದ ಇನ್ನಷ್ಟು ಅಪಘಾತಗಳು, ಸಾವು ನೋವುಗಳು ಸಂಭವಿಸುವ ಮುನ್ನ ಸಮರೋಪಾದಿಯಲ್ಲಿ ರಸ್ತೆಗಳ ದುರಸ್ತಿ ಮಾಡಬೇಕು. ಬೆಂಗಳೂರು ನಗರಕ್ಕೆ 25,000 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿ, ರಸ್ತೆಗಳು, ರಾಜಕಾಲುವೆಗಳನ್ನ ಸರಿಪಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com