
ಬೆಂಗಳೂರು: ಶಿಗ್ಗಾಂವಿ ಮತ್ತು ಸಂಡೂರಿನ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಶಿಗ್ಗಾಂವಿಯಿಂದ ಹಾಗೂ ಸಂಡೂರಿನಿಂದ ಬಂಗಾರು ಹನುಮಂತು ಸ್ಪರ್ಧಿಸುತ್ತಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿನಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಬಸವರಾಜ ಬೊಮ್ಮಯಿ ಅವರು ಹಾವೇರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದರು. ಇನ್ನು ಸಂಡೂರಿನ ಕಾಂಗ್ರೆಸ್ ಶಾಸಕ ತುಕಾರಾಮ್ ಸಹ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಗೆದ್ದು ಸಂಸದರಾಗಿದ್ದರು. ಇವರಿಬ್ಬರಿಂದ ತೆರವಾಗಿದ್ದ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿತ್ತು.
ಇನ್ನು ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದಿದ್ದ ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಕೇಂದ್ರ ಸಚಿವರಾಗಿದ್ದಾರೆ. ಇದೀಗ ಅವರಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರಕ್ಕೂ ಉಪಚುನಾವಣೆ ನಡೆಯಲಿದೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯಾರು ಎಂಬುದು ಇನ್ನು ನಿರ್ಣಯವಾಗಿಲ್ಲ. ಆದರೆ ಒಂದು ಮೂಲಗಳ ಪ್ರಕಾರ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಅವರೇ ಜೆಡಿಎಸ್ ಪಕ್ಷದ ಚಿಹ್ನೆ ಅಡಿಯಲ್ಲಿ ನಿಲ್ಲುವ ಸಾಧ್ಯೆತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ.
ನವೆಂಬರ್ 13ರಂದು ಉಪ ಚುನಾವಣೆಗೆ ಮತದಾನ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಮೂರು ಕ್ಷೇತ್ರವನ್ನು ಮೂರೂ ಪಕ್ಷಗಳೂ ಕೂಡ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಶಿಗ್ಗಾಂವಿ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದ್ದರೆ ಸಂಡೂರು ಕ್ಷೇತ್ರಕ್ಕೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಆಪ್ತ ಬಂಗಾರು ಹನುಮಂತುಗೆ ಟಿಕೆಟ್ ನೀಡಲಾಗಿದೆ.
Advertisement