
ಬೆಂಗಳೂರು: ನೈಸ್ ರಸ್ತೆ ವ್ಯಾಪ್ತಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕುಟಂಬದ ಆಸ್ತಿ ಎಷ್ಟಿದೆ ಎಂದು ಬಹಿರಂಗಪಡಿಸಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ನನಗೆ ಸೇರಿದ ದಾಖಲೆಗಳನ್ನು ಹುಡುಕುತ್ತಿದ್ದಾರೆ. ಎಲ್ಲೆಲ್ಲೋ ಹುಡುಕುವ ಅಗತ್ಯವಿಲ್ಲ. ಎಲ್ಲವೂ ಇ.ಡಿ, ಸಿಬಿಐ ಬಳಿ ಇವೆ. ಅವರ ದಾಖಲೆ ಬಹಿರಂಗ ಮಾಡದಿದ್ದರೆ ಸಮಯ ಬಂದಾಗ ನಾನೇ ಹೇಳುತ್ತೇನೆ ಎಂದರು. ವಿಶೇಷ ತನಿಖಾ ದಳವನ್ನು (ಎಸ್ಐಟಿ) ಶಿವಕುಮಾರ್ ತನಿಖಾ ಸಂಸ್ಥೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ. ಕುಮಾರಸ್ವಾಮಿ ಅವರು ನನ್ನನ್ನು ಸದಾ ಸ್ಮರಿಸುತ್ತಿರಬೇಕು. ಇಲ್ಲದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ. ಅವರು ಹಾಗೂ ಅವರ ಸಹೋದರರು ನನ್ನ ಸ್ಮರಿಸುತ್ತಲೇ ಇರುತ್ತಾರೆ. ಅವರು ನನ್ನ ದಾಖಲೆಗಳನ್ನು ಹುಡುಕಲು ಹರಸಾಹಸ ಪಡುತ್ತಿದ್ದಾರೆ. ನನ್ನ ಎಲ್ಲಾ ದಾಖಲೆಗಳು ಇ.ಡಿ ಸಿಬಿಐ ಬಳಿ ಇವೆ.
ಹೊಸದಾಗಿ ಹುಡುಕುವುದೇನಿಲ್ಲ. ಅವರು ನನಗೆ ಕೇಳಿದ್ದರೆ ನಾನೇ ಅವರಿಗೆ ನನ್ನ ದಾಖಲೆಗಳನ್ನು ಒದಗಿಸುತ್ತಿದ್ದೆ. ನಾವು ಇನ್ನೂ ಅವರ ಸುದ್ದಿಗೆ ಹೋಗಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ. ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದ್ದು ನಾವು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮುದಾಯದ ಜತೆ ಮತ್ತೆ ಚರ್ಚೆ ಮಾಡುತ್ತೇವೆ ಎಂದು ಡಿಸಿಎಂ ತಿಳಿಸಿದರು.ಕಾಲಮಿತಿಯಲ್ಲಿ ಮೀಸಲಾತಿ ನೀಡಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಬೇರೆ ಸಮಾಜಗಳಿಗೆ ನೋವಾಗುವಂತೆ ತೀರ್ಮಾನ ಮಾಡಿತ್ತು. ನಂತರ ಆ ಸರ್ಕಾರವೇ ನಾವು ಯಾವುದೇ ಮೀಸಲಾತಿ ಜಾರಿ ಮಾಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದೆ. ಈ ವಿಚಾರ ನ್ಯಾಯಾಲಯದಲ್ಲಿ ಇರುವಾಗ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ” ಎಂದರು ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಬಗ್ಗೆ ಕೇಳಿದಾಗ, “ನಾನೇ ಅಭ್ಯರ್ಥಿ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಹಸ್ತದ ಗುರುತೇ ಅಭ್ಯರ್ಥಿ” ಎಂದು ತಿಳಿಸಿದರು.
Advertisement