ಸಿಎಂ ಪತ್ನಿ ವಿರುದ್ಧ ಮತ್ತೊಂದು ಭೂಹಗರಣದ ಆರೋಪ; ರಾಜ್ಯದಲ್ಲಿ ಇನ್ನೂ 2 ದಿನ ಮಳೆ; ರೈಲು ಹಳಿ ತಪ್ಪಿಸಲು ವಿಧ್ವಂಸಕ ಕೃತ್ಯಕ್ಕೆ ಯತ್ನ; ಜೋಶಿ ಸಹೋದರನ ವಿರುದ್ಧ ಕೇಸ್ ವಾಪಸ್?: ಇವು ಇಂದಿನ ಪ್ರಮುಖ ಸುದ್ದಿಗಳು 20-10-2024

News highlights of the day
ಸುದ್ದಿ ಮುಖ್ಯಾಂಶಗಳು (ಸಂಗ್ರಹ ಚಿತ್ರ)online desk

1. ಜೋಶಿ ಸಹೋದರನ ವಿರುದ್ಧ ಕೇಸ್ ವಾಪಸ್?

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯಲಕ್ಷ್ಮಿ ಮತ್ತು ಗೋಪಾಲ್ ಅವರ ಪುತ್ರ ಅಜಯ್ ವಿರುದ್ಧ 2 ಕೋಟಿ ರೂಪಾಯಿ ವಂಚನೆ ದೂರು ದಾಖಲಿಸಿದ್ದ ಮಹಿಳೆ ಸುನೀತಾ ಚವ್ಹಾಣ್ ರಾಜಿ ಸಂಧಾನದ ಬಳಿಕ ತಾವು ದಾಖಲಿಸಿದ್ದ ಪ್ರಕರಣ ವಾಪಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿರುವ ಸುನೀತಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತುಂಬಾ ಒಳ್ಳೆಯವರು. ಅವರ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ಅವರ ಬಗ್ಗೆ ನನಗೆ ಧ್ವೇಷವಿಲ್ಲ. ನನಗೆ ವಂಚನೆಯಾಗಿದ್ದರಿಂದ ಮಾತ್ರ ನಾನು ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇನೆ. ಈಗ ಪ್ರಕರಣ ಬಗೆಹರಿದಿದೆ. ಹೀಗಾಗಿ ಪ್ರಕರಣ ವಾಪಸ್ ಪಡೆಯುತ್ತೇನೆ ಎಂದು ಸುನೀತಾ ತಿಳಿಸಿದ್ದಾರೆ.

2. ರೈಲು ಹಳಿ ತಪ್ಪಿಸಲು ವಿಧ್ವಂಸಕ ಕೃತ್ಯಕ್ಕೆ ಯತ್ನ

ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟು ಹಳಿ ತಪ್ಪಿಸಲು ದುಷ್ಕರ್ಮಿಗಳು ವಿಫಲ ಯತ್ನ ನಡೆಸಿರುವ ಘಟನೆ ಕರಾವಳಿಯ ತೊಕ್ಕೊಟ್ಟು ಮೇಲ್ಸೇತುವೆ ಬಳಿ ನಡೆದಿದೆ. ಆಗಂತುಕರು ರಾತ್ರಿ ವೇಳೆ ರೈಲು ಹಳಿಗಳ ಮೇಲೆ ಸಾಲಾಗಿ ಕಲ್ಲನ್ನು ಇಟ್ಟು, ರೈಲು ಹಳಿ ತಪ್ಪಿಸಲು ಯತ್ನಿಸಿದ್ದಾರೆ. ಇನ್ನು ಕೇರಳದಿಂದ ಮಂಗಳೂರಿಗೆ ಬರುವ ರೈಲು ಹಾಗೂ ಮಂಗಳೂರಿನಿಂದ ಕೇರಳಕ್ಕೆ ಹೋಗುವ ಎರಡೂ ರೈಲುಗಳು ಹಳಿಯ ಮೇಲೆ ಸಾಗುವಾಗ ದೊಡ್ಡ ಪ್ರಮಾಣದಲ್ಲಿ ಕಂಪನ ಹಾಗೂ ಶಬ್ದ ಉಂಟಾಗಿದ್ದು, ಸ್ಥಳೀಯರಿಗೆ ಅಸಹಜ ಅನುಭವವಾಗಿದೆ. ದರ ಬೆನ್ನಲ್ಲಿಯೇ ಸ್ಥಳ ಪರಿಶೀಲನೆ ಮಾಡಿದಾಗ ರೈಲು ಹಳಿಯ ಮೇಲೆ ಸಾಲಾಗಿ ಕಲ್ಲು ಇಟ್ಟಿದ್ದು, ರೈಲುಗಳು ಹೋದಾಗ ಅವುಗಳು ಪುಡಿ ಪುಡಿಯಾಗಿ ಬಿದ್ದಿರುವುದು ಪತ್ತೆಯಾಗಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ಉಗ್ರ ಸಂಘಟನೆಯ ಪಾಕ್‌ ಭಯೋತ್ಪಾದಕ ಫ‌ರ್ಹಾತುಲ್ಲಾ ಘೋರಿ ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವ ಎಚ್ಚರಿಕೆ ನೀಡಿದ್ದ

3. ಬೆಳಗಾವಿ ವಿಮಾನ ನಿಲ್ದಾಣದಕ್ಕೆ ಬೆದರಿಕೆ

ಕಳೆದ ಕೆಲವು ದಿನಗಳಿಂದ ಹಲವು ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬರುತ್ತಿದ್ದು, ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ಇಟ್ಟು ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜ್ ಅವರ ಇ-ಮೇಲ್ ಗೆ ಚೆನ್ನೈಯಿಂದ ಅಪರಿಚತನಿಂದ ಮೇಲ್ ಬಂದಿತ್ತು. ಇದರಿಂದ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಮಧ್ಯೆ ಬಾಂಬ್ ಭೀತಿಯ ನಡುವೆ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಬೆದರಿಕೆ ಇಮೇಲ್ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

4. ಸಿಎಂ ಪತ್ನಿ ವಿರುದ್ಧ ಮತ್ತೊಂದು ಭೂಹಗರಣದ ಆರೋಪ!

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಭೂ ಹಗರಣದ ಆರೋಪ ಕೇಳಿಬಂದಿದೆ. ಸಿಎಂ ಪತ್ನಿ ಪಾರ್ವತಿ ಮುಡಾ ಅನುಮೋದಿತ 20 ಗುಂಟೆ ಜಾಗವನ್ನು ಖರೀದಿ ಮಾಡಿದ್ದಾರೆ. ಅದರಲ್ಲಿ ರಸ್ತೆ ಮತ್ತು ಪೈಪ್‌ ಲೈನ್ ​ಗೆ ಸೇರಿದ್ದ ಜಾಗವನ್ನು ರಿಜಿಸ್ಟರ್‌ ಮಾಡಿಕೊಂಡಿದ್ದು, ಆ ವಿಚಾರ ತಿಳಿಯುತ್ತಿದ್ದಂತೆ ರಿಜಿಸ್ಟ್ರೇಷನ್ ತಿದ್ದುಪಡಿ ಮಾಡಿಸಿದ್ದಾರೆ ಎಂದು ಆರ್​ ಟಿ ಐ ಕಾರ್ಯಕರ್ತ ಗಂಗರಾಜು ಆರೋಪಿಸಿದ್ದಾರೆ. ಗೃಹಿಣಿಯಾಗಿರುವ ಪಾರ್ವತಿ ಅವರಿಗೆ ಆದಾಯದ ಮೂಲವೇ ಇಲ್ಲ, ತಮ್ಮ ಪತಿ ಸಿದ್ದರಾಮಯ್ಯ ನೀಡಿದ ಹಣದಲ್ಲಿ ಜಮೀನು ಖರೀದಿಸಿದ್ದಾರೆ. ರಸ್ತೆ ವಿಸ್ತರಣೆ ಹಾಗೂ ಪೈಪ್‌ಲೈನ್ ಯೋಜನೆಗೆ ಮೀಸಲಿಟ್ಟ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ. ಸಿದ್ದರಾಮಯ್ಯ ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿರುವುದರಿಂದ ರಾಜ್ಯಪಾಲರಿಗೆ ದೂರು ಸಲ್ಲಿಸಿ, ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವಂತೆ ಕೋರುತ್ತೇನೆ ಎಂದು ಗಂಗರಾಜು ತಿಳಿಸಿದ್ದಾರೆ.

5. ರಾಜ್ಯದಲ್ಲಿ ಇನ್ನೂ 2 ದಿನ ಮಳೆ

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಂದು ನೆನ್ನೆಯಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ರೈತರು ಕಂಗಾಲಾಗಿದ್ದಾರೆ. ರಾತ್ರಿ ಸುರಿದ ಮಳೆಯಿಂದಾಗಿ ಕುಮಾರಸ್ವಾಮಿ ಲೇಔಟ್ ರಸ್ತೆ ಜಲಾವೃತಗೊಂಡಿದ್ದು, ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್ ರಸ್ತೆಯೂ ಜಲಾವೃತಗೊಂಡಿದ್ದು, ವಾಹನ ಸವಾರರು ನೀರಿನಲ್ಲೇ ಸಂಚರಿಸಲು ಹರಸಾಹಸ ಪಡಬೇಕಾಯಿತು. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ 2 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com