ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ತೀವ್ರ ರಂಗೇರುತ್ತಿದ್ದು, ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿಯಾಗಿರುವ ಸಿಪಿ ಯೋಗೇಶ್ವರ್ ಇಂದು ತಮ್ಮ MLC ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಸಂಜೆ ಹುಬ್ಬಳ್ಳಿಗೆ ತೆರಳಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ, ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಒಂದು ಸಾಲಿನ ರಾಜೀನಾಮೆ ಪತ್ರವನ್ನುನೀಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚುನಾವಣೆಗೆ ಸ್ಪರ್ಧಿಸಬೇಕಾದರೆ MLC ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಆದ್ದರಿಂದ ರಾಜೀನಾಮೆ ಕೊಟ್ಟಿದ್ದೇನೆ. ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿಲ್ಲ. ನಾನು ಯಾವುದೇ ಪಕ್ಷ ಸೇರುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
8 ರಿಂದ 10ನೇ ತರಗತಿಗಳ ಅರ್ಧವಾರ್ಷಿಕ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನಿರ್ಬಂಧ ಹೇರಿದೆ. ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವುದಾಗಿ ಕರ್ನಾಟಕ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು ಮುಂದಿನ ಆದೇಶದವರೆಗೆ 8, 9 ಮತ್ತು 10ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸದಂತೆ ಹೇಳಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಯಾಕೆ ಕಿರುಕುಳ ನೀಡುತ್ತಿದ್ದೀರಾ?, ನೀವು ಈ ರೀತಿ ವರ್ತಿಸಬಾರದು, ನಿಮಗೆ ನಿಜವಾಗಿಯೂ ವಿದ್ಯಾರ್ಥಿಗಳ ಹಿತದ ಬಗ್ಗೆ ಕಾಳಜಿ ಇದ್ದರೆ ದಯವಿಟ್ಟು ಒಳ್ಳೆಯ ಶಾಲೆಗಳನ್ನು ತೆರೆಯಿರಿ ಎಂದು ಕೋರ್ಟ್ ಹೇಳಿದೆ. ಮಾರ್ಚ್ 22ರಂದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಸ್ಥೆ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು.
2023-24ನೇ ಹಣಕಾಸು ವರ್ಷದಲ್ಲಿ ಕರ್ನಾಟಕದ GSDP ಶೇ.10.2ರಷ್ಟು ಪ್ರಗತಿ ದಾಖಲಿಸಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಈ ಅವಧಿಯಲ್ಲಿ ದೇಶದ ಸರಾಸರಿ ಜಿಎಸ್‌ಡಿಪಿ ಶೇ.8.2 ಆಗಿದೆ. ನ್ಯಾಷನಲ್ ಸ್ಟಾಟಿಸ್ಟಿಕಲ್ ಎಸ್ಟಿಮೇಟ್ ಆರಂಭದಲ್ಲಿ ಶೇ. 4ರಷ್ಟು ಕರ್ನಾಟಕದ GSDP ಅಭಿವೃದ್ಧಿ ದರವನ್ನು ಅಂದಾಜಿಸಿತ್ತು. ಆದರೆ ಹಣಕಾಸು ವರ್ಷದ ಅಂತ್ಯಕ್ಕೆ ರಾಜ್ಯದ ಅಭಿವೃದ್ದಿ ದರ ಶೇ.13.1 ರಷ್ಟಾಗಿದ್ದು, ಎನ್‌ಎಸ್‌ಸಿ ಕರ್ನಾಟಕದ ಪ್ರಗತಿಯನ್ನು ತಪ್ಪಾಗಿ ಅಂದಾಜಿಸಿರುವುದು ಸ್ಪಷ್ಟವಾಗಿದೆ. ಕಳೆದ ಬಾರಿ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾಗಿದ್ದರೂ, ಜಾಗತಿಕವಾಗಿ ಐಟಿ ಮಾರುಕಟ್ಟೆ ಹಿನ್ನಡೆ ಅನುಭವಿಸಿದ್ದರೂ, ಕರ್ನಾಟಕ ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಾದ್ಯಂತ ವರುಣನ ಅಬ್ಬರ ಮುಂದುವರೆದಿದೆ. ಭಾನುವಾರ ಸಂಜೆಯಿಂದ ಸೋಮವಾರ ಬೆಳಗಿನ ಜಾವದ ನಡುವೆ 61.9 ಮಿಮೀ ಮಳೆಯಾಗಿದೆ. ನಗರದ ಬಹುತೇಕ ಭಾಗಗಳಲ್ಲಿ ಮಂಡಿಯುದ್ಧ ನೀರು ನಿಂತು ಸಾರ್ವಜನಿಕರು ಪರಪಾಡುವಂತಾಗಿದೆ. ಕೆಂಗೇರಿ, RR ನಗರ, ದಾಸರಹಳ್ಳಿ ಭಾಗಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುವಂತಾಯಿತು. ಇನ್ನು ಸರ್ಜಾಪುರದ ಆರ್ ಜಿಬಿ ಟೆಕ್ ಪಾರ್ಕ್ ಜಲಾವೃತಗೊಂಡಿತ್ತು. ರಸ್ತೆಯಲ್ಲಿ ಎರಡು ಅಡಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ಮಧ್ಯೆ ಇಂದೂ ಕೂಡ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದ್ದರಿಂದ ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ಅವರು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಇಂದು ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರು.
ಸೆಕ್ಸ್ ವಿಡಿಯೋ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮೂರು ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ. ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಎರಡು ಅತ್ಯಾಚಾರ ಪ್ರಕರಣ ಮತ್ತು ಒಂದು ಮಹಿಳೆ ಅಶ್ಲೀಲ ದೃಶ್ಯ ಸೆರೆಹಿಡಿದ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಇನ್ನೊಂದು ಅತ್ಯಾಚಾರ ಪ್ರಕರಣದ ಆದೇಶ ಪ್ರಕಟಿಸುವುದು ಬಾಕಿಯಿದೆ.
Advertisement