NDA ಮೈತ್ರಿಕೂಟಕ್ಕೆ ಶಾಕ್: Congress ಸೇರಿದ ಸಿಪಿ ಯೋಗೇಶ್ವರ್; ಬೆಂಗಳೂರಿನಲ್ಲಿ ಇಂದು ಸಹ ಧಾರಾಕಾರ ಮಳೆ; ಕೆರೆಗೆ ಬಿದ್ದು ಅಣ್ಣ-ತಂಗಿ ಸಾವು, 5 ಲಕ್ಷ ರೂ ಪರಿಹಾರ! ಇವು ಇಂದಿನ ಪ್ರಮುಖ ಸುದ್ದಿಗಳು 23-10-24

NDA ಮೈತ್ರಿಕೂಟಕ್ಕೆ ಶಾಕ್: Congress ಸೇರಿದ ಸಿಪಿ ಯೋಗೇಶ್ವರ್; ಬೆಂಗಳೂರಿನಲ್ಲಿ ಇಂದು ಸಹ ಧಾರಾಕಾರ ಮಳೆ; ಕೆರೆಗೆ ಬಿದ್ದು ಅಣ್ಣ-ತಂಗಿ ಸಾವು, 5 ಲಕ್ಷ ರೂ ಪರಿಹಾರ! ಇವು ಇಂದಿನ ಪ್ರಮುಖ ಸುದ್ದಿಗಳು 23-10-24

1. NDA ಮೈತ್ರಿಕೂಟಕ್ಕೆ ಶಾಕ್: ಕಾಂಗ್ರೆಸ್ ಸೇರಿದ ಸಿಪಿ ಯೋಗೇಶ್ವರ್

ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇರಾದೆ ಹೊಂದಿದ್ದ ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರು ಕೊನೆಗೂ ತಮಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ವಾಟ್ಸಾಪ್ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಯೋಗೇಶ್ವರ್, ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಬಳಿಕ ಮಾತನಾಡಿದ ಯೋಗೇಶ್ವರ್, ಕಳೆದ ಎರಡು ಮೂರು ತಿಂಗಳಿಂದ ನಡೆದ ರಾಜಕೀಯ ಬೆಳವಣಿಗೆಗಳು ನನಗೆ ಅಸಮಾಧಾನ ಮೂಡಿಸಿತ್ತು. ಇನ್ನು ಬಿಜೆಪಿಯಲ್ಲಿ ಇರುವುದು ಸೂಕ್ತವಲ್ಲ ಎಂದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದೇನೆ ಎಂದರು. ನಾಳೆ ಬೆಳಗ್ಗೆ ಚನ್ನಪಟ್ಟಣ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಯೋಗೇಶ್ವರ್ ನಾಮಪತ್ರ ಸಲ್ಲಿಸಲಿದ್ದಾರೆ.

2. ಬೆಂಗಳೂರಿನಲ್ಲಿ ಇಂದು ಸಹ ಧಾರಾಕಾರ ಮಳೆ, 100 ಮನೆಗಳು ಜಲಾವೃತ

ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಇಂದು ಸಹ ಧಾರಾಕಾರ ಮಳೆಯಾಗಿದೆ. ಬೆಂಗಳೂರು ದಕ್ಷಿಣ ಸಮೀಪದ ಯಲಚೇನಹಳ್ಳಿಯ ರಾಮಕೃಷ್ಣನಗರ ಮತ್ತು ಫಯಾಜಾಬಾದ್‌ನಲ್ಲಿ ಸುಮಾರು 100 ಮನೆಗಳು ಜಲಾವೃತವಾಗಿವೆ. ಮಳೆಯಿಂದಾಗಿ ಚರಂಡಿಯ ಗಲೀಜು ನೀರು ತುಂಬಿ ಮನೆಗಳಿಗೆ ನುಗ್ಗಿ ಜನಜೀವನ ದುಸ್ತರವಾಗಿದೆ. ಮತ್ತೊಂದೆಡೆ ನಿನ್ನೆ ಸುರಿದ ಮಳೆಯಿಂದಾಗಿ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ನಲ್ಲಿ ಮಳೆ ನೀರು ತುಂಬಿಕೊಂಡಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಇಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಇದೇ ವೇಳೆ ಅಪಾರ್ಟ್‌ಮೆಂಟ್‌ ನಲ್ಲಿರುವವರನ್ನು ಕೂಡಲೇ ಸ್ಥಳಾಂತರಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಗೆ ಖಡಕ್ ಸೂಚನೆ ನೀಡಿದರು. ಒಂದು ವೇಳೆ ಸ್ಥಳಾಂತರಕ್ಕೆ ನಿವಾಸಿಗಳು ಒಪ್ಪದಿದ್ದರೆ ಮನೆಯ ಬಾಗಿಲು ಒಡೆದಾದರೂ ಹೊರಗಡೆ ಕರೆದುಕೊಂಡು ಬನ್ನಿ. ಒಂದು ವಾರ ಬೇರೆ ಕಡೆ ನಿವಾಸಿಗಳಿಗೆ ವ್ಯವಸ್ಥೆ ಮಾಡಿ ಎಂದು ತಿಳಿಸಿದರು. ಕೆಂಗೇರಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಇಬ್ಬರು ಮಕ್ಕಳ ಕುಟುಂಬಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲಿದ್ದು, ಮಳೆ ನೀರಿನಿಂದ ಹಾನಿಗೀಡಾದ ಮನೆಗಳಿಗೆ ತಲಾ 10,000 ರೂಪಾಯಿ ಪರಿಹಾರ ನೀಡಲಾಗುವುದು ಮತ್ತು ವಸತಿ ರಹಿತರಿಗೆ ತಾತ್ಕಾಲಿಕ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

3. ನಿರ್ಮಾಣ ಹಂತದ ಕಟ್ಟಡ ಕುಸಿತ ದುರಂತ: ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ನಿನ್ನೆಯಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ಸಿಬ್ಬಂದಿ ಇಲ್ಲಿಯವರೆಗೂ 8 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನೂ ಮೂವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇರುವುದರಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇಲ್ಲಿಯವರೆಗೂ 13 ಮಂದಿಯನ್ನು ರಕ್ಷಿಸಲಾಗಿದ್ದು ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕ ಆಂಧ್ರ ಮೂಲದ ಭುವನ್ ರೆಡ್ಡಿ ಹಾಗೂ ಗುತ್ತಿಗೆದಾರ ಮುನಿಯಪ್ಪನನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಬಿಎನ್‌ಎಸ್, ಬಿಬಿಎಂಪಿ RERA ಕಾಯ್ದೆಯಡಿಯಲ್ಲಿ ಎಫ್ಐರ್ ದಾಖಲಿಸಲಾಗಿದೆ.

4. ವಿಜಯನಗರದಲ್ಲಿ ಕಲುಷಿತ ನೀರು ಸೇವಿಸಿ 5 ಮಂದಿ ಸಾವು

ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ತಂಬಿಗೇರಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಮಂಗಳವಾರ ತಡರಾತ್ರಿ ಮೂವರು ಗ್ರಾಮಸ್ಥರು ದಾವಣಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ 15 ದಿನಗಳಿಂದ ಕಲುಷಿತ ನೀರು ಸರಬರಾಜು ಆಗುತ್ತಿದೆ. ಇದನ್ನು ತಿಳಿಯದೆ ಗ್ರಾಮಸ್ಥರು ನೀರು ಕುಡಿದಿದ್ದಾರೆ. ಇದರಿಂದ ಗ್ರಾಮದ 25ಕ್ಕೂ ಹೆಚ್ಚು ಜನರು ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೆಲವರು ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಾವುಗಳು ಕಲುಷಿತ ನೀರು ಸೇವಿಸಿದ್ದರಿಂದಲೇ ಸಂಭವಿಸಿದೆ ಎಂದು ಲ್ಯಾಬ್ ವರದಿಗಳು ದೃಢಪಡಿಸಿವೆ. ಕಳೆದ ಒಂದು ವಾರದಲ್ಲಿ ಕರ್ನಾಟಕದಲ್ಲಿ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಕಳೆದ ರಾತ್ರಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಸಹ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದಾರೆ.

5. ವಿಜಯಪುರದಲ್ಲಿ Ranger swing ride ನಿಂದ ಬಿದ್ದು 21 ವರ್ಷದ ಯುವತಿ ಸಾವು

ವಿಜಯಪುರದ ನವಭಾಗ್ ರಸ್ತೆಯಲ್ಲಿರೋ ಫಿಶ್ ಟನಲ್ ಎಕ್ಸ್ಪೋದಲ್ಲಿ ನಡೆಯುತ್ತಿರುವ exhibitionನಲ್ಲಿ Ranger swing ride ನಿಂದ ಬಿದ್ದು 21 ವರ್ಷದ ಯುವತಿ ನಿಖಿತಾ ಬಿರಾದರ್ ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಫೀಶ್ ಟನಲ್ ಎಕ್ಪೋ ಮ್ಯಾನೇಜ್ಮೆಂಟ್ ನಿರ್ಲಕ್ಷ್ಯ ಎಂದು ಆರೋಪಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಪೊಲೀಸರು ಎಕ್ಸ್ಪೋ ಮ್ಯಾನೇಜರ್, ಆಪರೇಟರ್, ಕ್ಯಾಷಿಯರ್ ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com