
ಬೆಂಗಳೂರು: ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ನಲ್ಲಿನ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆಗೆಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದ ವೇಳೆ, ಸುಮಾರು 20 ಫ್ಲ್ಯಾಟ್‌ಗಳ ಮಾಲೀಕರು ಒಳಗೆ ಬೀಗ ಹಾಕಿಕೊಂಡು ಸ್ಥಳಾಂತರ ಕಾರ್ಯಾಚರಣೆಗೆ ಸಹಕಾರ ನೀಡಲು ನಿರಾಕರಿಸಿದ್ದಾರೆ.
ಈ ವೇಳೆ ಬಾಗಿಲು ಮುರಿದು ಕಾರ್ಯಾಚರಣೆ ಮುಂದುವರೆಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಗೆ ಡಿಸಿಎಂ ಸೂಚನೆ ನೀಡಿದ್ದಾರೆ.
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಶೇ.95ರಷ್ಟು ಸ್ಥಳಾಂತರ ಕಾರ್ಯ ಪೂರ್ಣಗೊಂಡಿದ್ದು, ಶೇ.5ರಷ್ಟು ಮಾತ್ರ ಬಾಕಿ ಉಳಿದಿದೆ. "603 ಫ್ಲಾಟ್‌ಗಳಲ್ಲಿ ಸಾವಿರಾರು ಜನರಿಗೆ ವಸತಿ ಇದೆ. ಅವರಲ್ಲಿ ಹೆಚ್ಚಿನವರು ಕೇಂದ್ರ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಾಗಿದ್ದಾರೆ. ಹೆಚ್ಚಿನವರನ್ನು ಸ್ಥಳಾಂತರಿಸಲಾಗಿದೆ.
ಮ್ಯಾನೇಜ್‌ಮೆಂಟ್‌ನೊಂದಿಗಿನ ಮಾತುಕತೆಯ ನಂತರ, ತುರ್ತು ಕಾಮಗಾರಿಗಳಿಂದಾಗಿ ಬಿಬಿಎಂಪಿ ಅಪಾರ್ಟ್ಮೆಂಟ್ ನ್ನು ಸ್ವಾಧೀನಪಡಿಸಿಕೊಂಡಿದೆ. ನೀರು, ವಿದ್ಯುತ್ ಮತ್ತು ಆಹಾರವಿಲ್ಲದೇ ಮನೆಗಳಿಗೆ ಬೀಗ ಹಾಕಿಕೊಂಡಿರುವ ಸುಮಾರು 20 ಮಂದಿ ಫ್ಲಾಟ್ ಮಾಲೀಕರ ಆರೋಗ್ಯಕ್ಕೆ ಹಾನಿಯಾಗುವ ಭೀತಿಯಿಂದ ನಿವಾಸಿಗಳ ಸಂಘ ಮತ್ತು ಪೊಲೀಸರ ನೆರವು ಪಡೆದು ಬಾಗಿಲು ಒಡೆದು ರಕ್ಷಿಸುವಂತೆ ಬಿಬಿಎಂಪಿಗೆ ಆದೇಶ ನೀಡಲಾಗಿದೆ" ಎಂದರು.
ನಿವಾಸಿಗಳು ತಮ್ಮ ಮನೆಗಳ ಬಗ್ಗೆ ಭಾವನಾತ್ಮಕವಾಗಿರಬಹುದು ಮತ್ತು ಆದ್ದರಿಂದ ಹೊರಗೆ ಬರಲು ನಿರಾಕರಿಸಬಹುದು ಆದರೆ ಅವರ ಸುರಕ್ಷತೆಯೂ ಮುಖ್ಯವಾಗಿದೆ ಎಂದು ಡಿಸಿಎಂ ಹೇಳಿದರು. ಅವರನ್ನು ಒಂದು ವಾರದವರೆಗೆ ಹತ್ತಿರದ ಹೋಟೆಲ್‌ಗಳಲ್ಲಿ ಇರಿಸಲಾಗುವುದು ಮತ್ತು ಪರಿಸ್ಥಿತಿ ಸಹಜವಾದ ನಂತರ ಅವರನ್ನು ತಮ್ಮ ಮನೆಗಳಿಗೆ ಹಿಂತಿರುಗುವಂತೆ ಕೇಳಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ.
ಪ್ರವಾಹದ ಮೂಲವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಶಿವಕುಮಾರ್ ಇದೇ ವೇಳೆ ತಿಳಿಸಿದ್ದಾರೆ. ಈ ಪ್ರದೇಶ ಮೊದಲು ಜೌಗು ಪ್ರದೇಶ ಮತ್ತು ಸರೋವರದ ಬಫರ್ ವಲಯವಾಗಿತ್ತು. "ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ನಾವು ಪ್ರವಾಹಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುತ್ತೇವೆ" ಎಂದು ಅವರು ಹೇಳಿದರು. ಬೆಂಗಳೂರು ಮಾತ್ರವಲ್ಲದೆ ಮುಂಬೈ, ಫ್ರಾನ್ಸ್ ಮತ್ತು ಇತರ ಸ್ಥಳಗಳಲ್ಲಿ ಪ್ರವಾಹವಿದೆ. ಯಾವುದೇ ಪ್ರಾಣ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿಸಿಎಂ ಹೇಳಿದ್ದಾರೆ.
ಎನ್‌ಡಿಎಂಎಫ್‌ನೊಂದಿಗೆ ಮಳೆನೀರು ಚರಂಡಿಗಳನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ವಿಶ್ವಬ್ಯಾಂಕ್‌ನಿಂದ ಹಣವನ್ನು ಪಡೆಯಲಾಗುವುದು ಎಂದು ಅವರು ಇದೇ ವೇಳೆ ಹೇಳಿದರು. ಮರುವಿನ್ಯಾಸವನ್ನು ನಗರದಾದ್ಯಂತ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಲಾಗುವುದು. ಕೆರೆಗಳ ಪುನಶ್ಚೇತನ ಹಾಗೂ ಒತ್ತುವರಿ ತೆರವು ಮಾಡುತ್ತೇವೆ ಎಂದೂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
Advertisement