ಚನ್ನಪಟ್ಟಣ: ನಿಖಿಲ್ NDA ಅಭ್ಯರ್ಥಿ, 'ಕೈ'ನಿಂದ CPY ನಾಮಪತ್ರ ಸಲ್ಲಿಕೆ; ಕಟ್ಟಡ ಕುಸಿತ ದುರಂತ: BBMP AEE ಅಮಾನತು; ಶಿಗ್ಗಾಂವಿಯಿಂದ ಯಾಸಿರ್ ಅಹ್ಮದ್ ಖಾನ್ ಸ್ಪರ್ಧೆ! ಇವು ಇಂದಿನ ಪ್ರಮುಖ ಸುದ್ದಿಗಳು 24-10-24

ಚನ್ನಪಟ್ಟಣ: ನಿಖಿಲ್ NDA ಅಭ್ಯರ್ಥಿ, 'ಕೈ'ನಿಂದ CPY ನಾಮಪತ್ರ ಸಲ್ಲಿಕೆ; ಕಟ್ಟಡ ಕುಸಿತ ದುರಂತ: BBMP AEE ಅಮಾನತು; ಶಿಗ್ಗಾಂವಿಯಿಂದ ಯಾಸಿರ್ ಅಹ್ಮದ್ ಖಾನ್ ಸ್ಪರ್ಧೆ! ಇವು ಇಂದಿನ ಪ್ರಮುಖ ಸುದ್ದಿಗಳು 24-10-24

1. ಚನ್ನಪಟ್ಟಣ ಉಪಚುನಾವಣೆ: ನಿಖಿಲ್ NDA ಅಭ್ಯರ್ಥಿ, ನಾಮಪತ್ರ ಸಲ್ಲಿಸಿದ ಸಿಪಿಯೋಗೇಶ್ವರ್

ಚನ್ನಪಟ್ಟಣ ಉಪಚುನಾವಣೆಯಲ್ಲಿ NDA ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಜೆಡಿಎಸ್-ಬಿಜೆಪಿ ನಾಯಕರ ಸಮನ್ವಯ ಸಭೆ ಬಳಿಕ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ BSY ಈ ಘೋಷಣೆ ಮಾಡಿದರು. ಇದಕ್ಕೂ ಮುನ್ನ ಇಂದು ಬೆಳಗ್ಗೆ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿಖಿಲ್ ಸ್ಪರ್ಧೆಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಗಿತ್ತು. ಮತ್ತೊಂಡೆದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಮಧ್ಯೆ ಶಿಗ್ಗಾಂವಿ ಉಪಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಮುಸ್ಲಿಂ ಸಮುದಾಯದ ಯಾಸಿರ್‌ ಅಹ್ಮದ್‌ ಖಾನ್‌ ಪಠಾಣ್‌ ಎಂಬುವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

2. ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿತ: ಮೃತರ ಕುಟುಂಬಕ್ಕೆ ರಾಜ್ಯದಿಂದ 5 ಲಕ್ಷ ಕೇಂದ್ರದಿಂದ 2 ಲಕ್ಷ ಪರಿಹಾರ

ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿತದಲ್ಲಿ ಮೃತಪಟ್ಟ 8 ಮಂದಿಯ ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇಂದು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಪರಿಸ್ಥಿತಿ ಅವಲೋಕಿಸಿದರು. ನಂತರ ಮಾತನಾಡಿದ ಅವರು, ನಿನ್ನೆ ಕೇರಳದ ವಯನಾಡಿಗೆ ಹೋಗಿದ್ದೆ. ಹಾಗಾಗಿ ಇಲ್ಲಿಗೆ ಬರುವುದು ತಡವಾಯಿತು. ಕಟ್ಟಡ ಕುಸಿತ ದುರಂತದಲ್ಲಿ ಆರು ಮಂದಿಗೆ ಗಾಯಗಳಾಗಿವೆ, ಅವರ ಆಸ್ಪತ್ರೆ ಖರ್ಚನ್ನು ಸರ್ಕಾರ ಭರಿಸುತ್ತದೆ ಎಂದರು. ಮತ್ತೊಂದೆಡೆ ಘಟನೆ ಕುರಿತಂತೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಮೃತ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು.

3. ಕಟ್ಟಡ ಕುಸಿತ ದುರಂತ: ಬಿಬಿಎಂಪಿ AEE ಅಮಾನತು

ಬಾಬುಸಾಬ್ ಪಾಳ್ಯದಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕರಿಗೆ ಮೂರು ಬಾರಿ ನೋಟಿಸ್ ಜಾರಿಗೊಳಿಸಿ ಅನಧಿಕೃತ ಮಹಡಿಗಳನ್ನು ತೆಗೆದುಹಾಕುವಂತೆ ಬಿಬಿಎಂಪಿ ನಿರ್ದೇಶನ ನೀಡಿರುವುದು ಬೆಳಕಿಗೆ ಬಂದಿದೆ. ಈ ಮಧ್ಯೆ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಕ್ರಮಕೈಗೊಳ್ಳದ ಆರೋಪದಡಿ ಹೊರಮಾವು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿನಯ್‌ ಅವರನ್ನು ಅಮಾನತು ಮಾಡಲಾಗಿದೆ. ಮತ್ತೊಂದು ದುರ್ಘಟನೆಯಲ್ಲಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಳೆ ನೀರಿನಿಂದ ತುಂಬಿದ 5 ಅಡಿ ಆಳದ ತೆರೆದ ಲಿಫ್ಟ್ ಶಾಫ್ಟ್‌ನಲ್ಲಿ ಮುಳುಗಿ 7 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಕನ್ನಮಂಗಲ ನಿವಾಸಿ 2ನೇ ತರಗತಿಯಲ್ಲಿ ಓದುತ್ತಿರುವ ಸುಹಾಸ್ ಗೌಡ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಆಯಾ ತಪ್ಪಿ ಲಿಫ್ಟ್ ಗಾಗಿ ಅಗೆದಿದ್ದ ಜಾಗದಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಹಾಲಿನ ಡೈರಿಗಾಗಿ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ಡೈರಿ ಅಧ್ಯಕ್ಷ ಸಣ್ಣಪ್ಪ ಮತ್ತು ಅನಿಲ್ ವಿರುದ್ಧ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

4. ಬನ್ನೇರುಘಟ್ಟದಲ್ಲಿ ಆನೆಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಕಾವಾಡಿಗ ಸಾವು

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆ ಸ್ನಾನ ಮಾಡುತ್ತಿದ್ದ ವೇಳೆ ಕಾವಾಡಿಗ ಗೋಪಾಲ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಆನೆ ಪಾಲನಾ ಕೇಂದ್ರ ಪ್ರದೇಶದ ಸೀಗೆಕಟ್ಟೆ ಕೆರೆಯಲ್ಲಿ 10 ವರ್ಷದ ಸಂಪತ್ ಎಂಬ ಆನೆಯನ್ನು ಸ್ವಚ್ಛಗೊಳಿಸುವ ವೇಳೆ ಘಟನೆ ನಡೆದಿದೆ. ಆನೆಯ ಮೈತೊಳೆಯುವಾಗ ಆಕಸ್ಮಿಕವಾಗಿ ಆನೆಯು ಗಾಬರಿಗೊಂಡು ಕೆರೆಯಲ್ಲಿ ಆಳದ ನೀರಿಗೆ ಇಳಿಯಿತು. ಈ ವೇಳೆ ಕಾವಾಡಿಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿಯೇ ಇದ್ದ ಇತರರು ಗೋಪಾಲ್ ನನ್ನು ರಕ್ಷಿಸಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

5. ಕೆಎಸ್ಆರ್ ಟಿಸಿ ಪಲ್ಟಿ: ಓರ್ವ ಮಹಿಳೆ ಸಾವು

ವಿಜಯನಗರದ ಹರಪ್ಪನಹಳ್ಳಿನ ಸತ್ತೂರು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೇ KSRTC ಬಸ್ ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದೆ. ಅಪಘಾತದಲ್ಲಿ ಸುತ್ತೂರು ಗ್ರಾಮದ ಹನುಮಕ್ಕ ಮೃತಪಟ್ಟಿದ್ದಾರೆ. ಗಾಯಾಳುಗಳ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂಡೆದೆ ಬೆಂಗಳೂರಿನ ಯಲಹಂಕದಲ್ಲಿ ಇಂದು ಬೆಳಗ್ಗೆ ಸರಣಿ ಅಪಘಾತ ಸಂಭವಿಸಿದೆ. ಸರಣಿ ಅಪಘಾತದಲ್ಲಿ 7 ಕಾರುಗಳು ಅಪಘಾತಕ್ಕೀಡಾಗಿವೆ. ಅಪಘಾತದಲ್ಲಿ ಕಾರೊಂದರಲ್ಲಿದ್ದ ಮಗುವಿನ ಕೈಗೆ ಗಂಭೀರ ಗಾಯವಾಗಿದೆ. ಅದನ್ನು ಬಿಟ್ಟರೆ ಸದ್ಯ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com