
ಬೆಂಗಳೂರು: ವಕ್ಫ್ ಆಕ್ರಮಿತ ಆಸ್ತಿ, ವ್ಯಾಜ್ಯಗಳ ಕುರಿತಾಗಿ ವಿಜಯಪುರ ಜಿಲ್ಲೆಯ ಹೊನವಾಡ, ಕೋಲ್ಹಾರ ಮತ್ತಿತರ ಗ್ರಾಮಗಳ ರೈತರೊಂದಿಗೆ ಸಂಸದ ತೇಜಸ್ವಿ ಸೂರ್ಯ ಸಭೆ ನಡೆಸಿ ಚರ್ಚಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ವಿಜಯಪುರ ಜಿಲ್ಲೆಯೊಂದರಲ್ಲೇ 15 ಸಾವಿರ ಎಕರೆಗಳಿಗೂ ಅಧಿಕ ಭೂಮಿ ಅತಿಕ್ರಮಣವಾಗಿದ್ದು, ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮ ಒಂದರಲ್ಲೇ 1,200 ಎಕರೆ ಗಳಷ್ಟು ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗಷ್ಟೇ ವಿಜಯಪುರಕ್ಕೆ ಭೇಟಿ ನೀಡಿರುವ ವಕ್ಫ್ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್ ಮುಂಬರುವ 15 ದಿನಗಳ ಒಳಗೆ ವಕ್ಫ್ ಆಸ್ತಿ ನೋಂದಣಿಗೆ ಜಿಲ್ಲಾಡಳಿತವನ್ನು ಒತ್ತಾಯಿಸಿರುವುದು ಆಶ್ಚರ್ಯ ತಂದಿದೆ. ತಾತ - ಮುತ್ತಾತಂದಿರ ಕಾಲದಿಂದಲೂ ಕೃಷಿ,ಇತರ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ಎಷ್ಟೋ ಕುಟುಂಬಗಳಿಗೆ ತರಾತುರಿಯಲ್ಲಿ ನೋಟಿಸ್ ನೀಡಲಾಗಿದೆ. ಕೆಲವೊಂದು ದಾಖಲೆಗಳಲ್ಲಿ, ವಕ್ಫ್ ಬೋರ್ಡ್ - ಕರ್ನಾಟಕ ಸರ್ಕಾರದ ಅನ್ವಯ ಎಂದು ನಮೂದಿಸಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಆಡಳಿತ ನಡೆಸಬೇಕಿರುವುದು ಅಂಬೇಡ್ಕರ್ ವಿರಚಿತ ಸಂವಿಧಾನದ ಆಧಾರದ ಮೇಲೆಯೇ ಹೊರತು, ಷರಿಯಾ ಅಥವಾ ಜಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ ನವರ ಅಣತಿಯಂತೆ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ರಾಜ್ಯ ಸರಕಾರ ,ಸಚಿವರ ಒತ್ತಡದ ಮೇಲೆ ತರಾತುರಿಯಲ್ಲಿ ವಕ್ಫ್ ಹೆಸರಿನಲ್ಲಿ ಆಸ್ತಿ ನಮೂದಿಗೆ ಅಧಿಕಾರಿಗಳು ಪ್ರಯತ್ನಪಟ್ಟಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಕ್ಫ್ ಕಾಯ್ದೆ ಹೆಸರಿನಲ್ಲಿ ಕಾನೂನು ಪ್ರಕಾರವೇ ಲೂಟಿಗೆ ಇಳಿಯುವ ಶಾಸನಬದ್ಧ ಅಧಿಕಾರವನ್ನು ಕಾಂಗ್ರೆಸ್ ಒದಗಿಸಿದ್ದೇ ಈ ರೀತಿಯ ಗೊಂದಲಗಳಿಗೆ ಮೂಲ ಕಾರಣವಾಗಿದ್ದು, ಈ ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶೀಘ್ರವೇ ತಿದ್ದುಪಡಿ ಮಸೂದೆ ಜಾರಿಗೆ ತರಲು ಹೊರಟಿದೆ. ವಕ್ಫ್ ಬೋರ್ಡ್ ನಿಂದ ನೋಟಿಸ್ ಬಂದಿದೆ ಎಂದ ತಕ್ಷಣ ಗಾಬರಿ, ಆತಂಕಗೊಳ್ಳುವ ಅಗತ್ಯವಿಲ್ಲ. ಕಾನೂನು ಹೋರಾಟದ ಮೂಲಕ ಈ ರೀತಿಯ ಅಕ್ರಮಗಳ ವಿರುದ್ಧ ಸೆಣಸುವ ಎಲ್ಲ ಅವಕಾಶಗಳಿವೆ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದರು.
ವಕ್ಫ್ ಕಾಯ್ದೆ ಮೂಲಕ ಬಹುಸಂಖ್ಯಾತ ಹಿಂದೂಗಳಿಗೆ ಕಾಂಗ್ರೆಸ್ ಮಾಡಿರುವ ಮೋಸ, ಅನ್ಯಾಯವನ್ನು ಸಾರ್ವಜನಿಕರು ಅರಿಯಬೇಕಿದೆ. ವಕ್ಫ್ ಬೋರ್ಡ್ ಗೆ ಸಾರ್ವಜನಿಕ, ಸರ್ಕಾರಿ ಭೂಮಿಯನ್ನು ಕಾನೂನುಬದ್ಧವಾಗಿಯೇ ಕಬಳಿಸುವ ಅವಕಾಶ ಒದಗಿಸಿ, ಇಂದು ರೈತರು, ಸಾಮಾನ್ಯ ಜನತೆಗೆ ಸಂಕಷ್ಟ ತಂದೊಡ್ಡಿದೆ. ಕಾಂಗ್ರೆಸ್ ನ ಪ್ರಭಾವೀ ನಾಯಕರು ವಕ್ಫ್ ಹೆಸರಿನಲ್ಲಿ ಕಬಳಿಸಿರುವ ಭೂಮಿಯ ಕುರಿತು ವಕ್ಫ್ ವರದಿಯೇ ತಿಳಿಸಿದೆ ಎಂದು ಅವರು ಹೇಳಿದರು.
Advertisement