ಬೇಲೆಕೇರಿ ಬಂದರಿನಿಂದ ಅದಿರು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಮೂರನೇ ಪ್ರಕರಣದಲ್ಲಿ ಈ ಶಿಕ್ಷೆ ಪ್ರಕಟಿಸಲಾಗಿದೆ. ಇದಲ್ಲದೆ ಉಳಿದ ಪ್ರಕರಣಗಳಲ್ಲಿಯೂ ಶಿಕ್ಷೆ ಪ್ರಮಾಣ ಹಾಗೂ ದಂಡ ಪ್ರಕಟಿಸಲಾಗಿದೆ. ಒಟ್ಟಾರೆಯಾಗಿ ಒಳಸಂಚಿಗೆ 5 ವರ್ಷ, ವಂಚನೆಗೆ 7 ವರ್ಷ, ಕಳ್ಳತನಕ್ಕೆ 3 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಒಟ್ಟು ಆರು ಪ್ರಕರಣಗಳಲ್ಲಿ ಈವರೆಗೆ ವಿಧಿಸಿದ ದಂಡದ ಮೊತ್ತ ಸುಮಾರು 44 ಕೋಟಿ ರೂಪಾಯಿ ದಾಟಿದೆ. ಈಗ ಕಳೆದಿರುವ ಶಿಕ್ಷೆ ಪ್ರಮಾಣ ಹೊರತುಪಡಿಸಿ ಉಳಿದ ಶಿಕ್ಷೆ ಅನುಭವಿಸಬೇಕಿದೆ. ಸತೀಶ್ ಸೈಲ್ ಜತೆ ಮಹೇಶ್ ಬಿಳಿಯೆ, ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್ ಖಾರದಪುಡಿ ಮಹೇಶ್, ಮಲ್ಲಿಕಾರ್ಜುನ ಶಿಪ್ಪಿಂಗ್‌ಗೂ ಜೈಲು ಶಿಕ್ಷೆ ವಿಧಿಸಲಾಗಿದೆ. 2010ರಲ್ಲಿ ಸತೀಶ್ ಮಾಲಿಕತ್ವದ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಅಕ್ರಮವಾಗಿ ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿತ್ತು. 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವುದರಿಂದ ಶಾಸಕ ಸತೀಶ್ ಸೈಲ್ ಗೆ ಅನರ್ಹತೆ ಭೀತಿ ಎದುರಾಗಿದೆ.
ಮುಂಗಾರು ಅವಧಿಯಲ್ಲಿ ಸುರಿದ ಭಾರೀ ಮಳೆಗೆ ಒಟ್ಟು 25 ಮಂದಿ ಸಾವನ್ನಪ್ಪಿದ್ದು, ಕುಟುಂಬ ಸದಸ್ಯರಿಗೆ ಪರಿಹಾರ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ. ಅಧಿಕಾರಿಗಳು ಮತ್ತು ಸಂಪುಟ ಸಹೋದ್ಯೋಗಿಗಳೊಂದಿಗಿನ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯಿಂದಾಗಿ 1.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. 84 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 2,077 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಇಡೀ ಮನೆ ಕಳೆದುಕೊಂಡವರಿಗೆ 1.20 ಲಕ್ಷ ರೂಪಾಯಿ, ಭಾಗಶಃ ಹಾನಿಗೊಳಗಾದ ಮನೆಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ ಎಂದು ತಿಳಿಸಿದರು. ಒಟ್ಟು 74,993 ಹೆಕ್ಟೇರ್ ಕೃಷಿ ಬೆಳೆ ಹಾನಿ ಮತ್ತು 30,941 ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಅತಿವೃಷ್ಟಿಯಿಂದ ಹಾನಿಗೀಡಾಗಿವೆ ಎಂದು ಅಂದಾಜಿಸಲಾಗಿದೆ. ಅಕ್ಟೋಬರ್ 1 ರಿಂದ 25 ರವರೆಗೆ ರಾಜ್ಯದಲ್ಲಿ ಸರಾಸರಿ 181 ಮಿ.ಮೀ ಮಳೆಯಾಗಿದ್ದು, ಈ ಬಾರಿ ಶೇ.58 ರಷ್ಟು ಅಧಿಕ ಮಳೆಯಾಗಿದೆ. ರಾಜ್ಯದಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದು ಒತ್ತಿ ಹೇಳಿದ ಸಿದ್ದರಾಮಯ್ಯ, ಜಿಲ್ಲಾಧಿಕಾರಿಗಳ ಬಳಿ 551.25 ಕೋಟಿ ಹಾಗೂ ತಹಶೀಲ್ದಾರರ ಬಳಿ 115 ಕೋಟಿ ರೂ. ಹಣದ ನಿಧಿ ಇರುವುದಾಗಿ ತಿಳಿಸಿದರು.
ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಬೇಕು. ರಾತ್ರಿ 8 ಗಂಟೆಯಿಂದ 10 ಗಂಟೆ ಒಳಗೆ ಮಾತ್ರ ಪಟಾಕಿ ಹೊಡೆಯಬೇಕಿದ್ದು ಪಟಾಕಿ ಅವಘಡ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳ ಜತೆ ಗೃಹಕಚೇರಿ ಕೃಷ್ಣಾದಲ್ಲಿ ಇಂದು ಸಭೆ ನಡೆಸಿದ ಸಿಎಂ, ಸುಪ್ರೀಂ ಕೋರ್ಟ್ ಆದೇಶದಂತೆ ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಗೆ ಅವಕಾಶ ನೀಡಬಾರದು. ಪಟಾಕಿ ದಾಸ್ತಾನು, ಮಾರಾಟ ಪ್ರಕ್ರಿಯೆಯಲ್ಲಿ ಲೋಪ ಆಗಬಾರದು. ಸುರಕ್ಷತೆ ವಿಷಯದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಿ, ನಿಯಮ ಮೀರಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯ ಪ್ರವಾಸದಲ್ಲಿರುವ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದು, ರಾಷ್ಟ್ರದ ಅಭಿವೃದ್ಧಿ ಮತ್ತು ರೈತರ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಿದರು. ದೇವೇಗೌಡರೊಂದಿಗೆ ಒಂದು ಗಂಟೆ ಕಾಲ ಕಳೆದ ಉಪರಾಷ್ಟ್ರಪತಿ, ಗೌಡರ ಪತ್ನಿ ಚೆನ್ನಮ್ಮ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ನಿನ್ನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಬಿ.ಜಿ ನಗರದಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಜಗದೀಪ್ ಧನಕರ್ ಅವರು, ಈ ವೇಳೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದ ಅವರು, ನಿರ್ಗತಿಕರಿಗೆ, ದುರ್ಬಲರಿಗೆ ಸಹಾಯ ಮಾಡಲು ಯಾವುದೇ ಷರತ್ತುಗಳು ಇರಬಾರದು ಎಂದು ಹೇಳಿದ್ದರು.
Advertisement