
ವಿಜಯಪುರದಲ್ಲಿ ವಕ್ಫ್ ಆಸ್ತಿ ವಿವಾದ ದೇಶಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿದೆ. ರೈತರ ಜಮೀನನ್ನು ವಕ್ಫ್ ಮಂಡಳಿಗೆ ಸೇರಿಸುವ ಹುನ್ನಾರಕ್ಕೆ ಸರ್ಕಾರ ಕೈಹಾಕಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್, ವಿಜಯಪುರ ಜಿಲ್ಲೆಯಲ್ಲಿ ಒಟ್ಟು 14,201 ಎಕರೆ ಜಮೀನು ವಕ್ಫ್ ಮಂಡಳಿಗೆ ಸೇರಿದೆ. ಈ 14,201 ಎಕರೆಯಲ್ಲಿ ಶೇ70 ರಷ್ಟು ಆಸ್ತಿ ಮುಸ್ಲಿಮರಿಗೆ ಸೇರಿದೆ. ಉಳಿದ ಶೇ30ರಷ್ಟು ಜಾಗ ಹಿಂದೂಗಳಿಗೆ ಮಾರಾಟವಾಗಿದೆ. ಇನ್ನು ಹೊನವಾಡ ಗ್ರಾಮದಲ್ಲಿ 1200 ಎಕರೆ ರೈತರ ಭೂಮಿ ವಕ್ಫ್‌ಗೆ ಸೇರಿದೆ ಎಂಬ ಸುದ್ದಿ ಸುಳ್ಳು. ಹೊನವಾಡ ಗ್ರಾಮದ ಯಾವುದೇ ರೈತನಿಗೆ ನೋಟಿಸ್ ನೀಡಿಲ್ಲ. ಹೊನವಾಡ ಗ್ರಾಮದ ಜಮೀನಿನಗಳು 1974ರಲ್ಲಿ ವಕ್ಫ್ ಗೆಜೆಟ್ನಲ್ಲಿ ತಪ್ಪಾಗಿ ನಮೂದಿಸಲಾಗಿದೆ. 1977ರಲ್ಲಿ ಈ ತಪ್ಪನ್ನು ವಕ್ಫ್ ಮಂಡಳಿ ಸರಿಪಡಿಸಿದೆ. ಹೊನವಾಡ ಗ್ರಾಮದ 10 ರಿಂದ 11 ಎಕರೆ ಮಾತ್ರ ವಕ್ಫ್‌ಗೆ ಸೇರಿದೆ. ಉಳಿದ ಜಮೀನು ಹೊನವಾಡ ಗ್ರಾಮದ ರೈತರಿಗೆ ಸೇರಿದೆ. ಗೆಜೆಟ್ ನೋಟಿಫಿಕೇಷನ್ನಿಂದ ಗೊಂದಲ ಸೃಷ್ಟಿಯಾಗಿದೆ. ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.
ಕಾಂಗ್ರೆಸ್ ನ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿ, ಹಣ ವಸೂಲಿಗೆ ಯತ್ನಿಸಿದ್ದ ಕಲಬುರಗಿಯ ಮಹಮ್ಮದ್ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ನಲ್ಲಿ ಸಕ್ರಿಯವಾಗಿದ್ದರಿಂದ ಮಾಲೀಕಯ್ಯಗೆ ಆಕೆಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ನಿತ್ಯ ಮೊಬೈಲ್‌ನಲ್ಲಿ ಸಲುಗೆಯಲ್ಲಿ ಮಾತನಾಡುತ್ತಿದ್ದರು. ಈ ನಡುವೆ ವಿಡಿಯೋ ಕಾಲ್‌ಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಆಕೆ, ಬಳಿಕ ಇವುಗಳನ್ನು ಮುಂದಿಟ್ಟು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದಳು. ಅಲ್ಲದೇ ಬೆಂಗಳೂರಿನಲ್ಲಿ ನೆಲೆಸಿರುವ ಮಾಲೀಕಯ್ಯ ಪುತ್ರ ರಿತೀಶ್ ಭೇಟಿಯಾಗಿ ಡೀಲ್ ಮಾತನಾಡಿದ್ದರು. ಈ ಸಂಬಂಧ ರಿತೀಶ್ ನೀಡಿದ ದೂರಿನ ಹಿನ್ನೆಲಯಲ್ಲಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ದೇಶಾದ್ಯಂತ ವಿಮಾನಗಳನ್ನು ಸ್ಫೋಟಿಸುವ ಹುಸಿ ಬಾಂಬ್ ಕರೆಗಳು ದಿನಂಪ್ರತಿ ವರದಿಯಾಗುತ್ತಿವೆ. ಇಂದು ಬೆಂಗಳೂನಿಂದ ಅಯೋಧ್ಯೆ ನಡುವೆ ಸಂಚರಿಸುವ ಆಕಾಶ್ ವಿಮಾನಕ್ಕೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಅಯೋಧ್ಯೆಯ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿ ಪರಿಶೀಲನೆ ಬಳಿಕ ಯಾವುದೇ ಬಾಂಬ್ ಪತ್ತೆಯಾಗದ ಹಿನ್ನೆಲೆ ಇದೊಂದು ಹುಸಿಬಾಂಬ್ ಕರೆ ಎಂದು ಅಯೋಧ್ಯೆ ಏರ್‌ಪೋರ್ಟ್ ಸಿಬ್ಬಂದಿಗಳು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಿಂದ ಅಯೋಧ್ಯೆಗೆ 173 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಕಾಶ ಏರ್ಲೈನ್ಸ್ಗೆ ಹುಸಿಬಾಂಬ್ ಬೆದರಿಕೆ ಬಂದಿತ್ತು.
ಬೆಂಗಳೂರಿನಲ್ಲಿ ಮಳೆ ಕೊಂಚ ವಿರಾಮ ನೀಡಿದೆ. ಆದರೆ ದಾಖಲೆಯ ಮಳೆಯಿಂದಾಗಿ ನೀರು ನಿಂತಲ್ಲೇ ನಿಂತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಡೆಂಗ್ಯೂ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಹೀಗಾಗಿ ಬಿಬಿಎಂಪಿ ಕೆಲ ಮಾರ್ಗಸೂಚಿಯನ್ನು ಹೊರಡಿಸಿದೆ. ಬಿಬಿಎಂಪಿ ಹಾಗೂ ಜಲಮಂಡಳಿ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಆದೇಶ ನೀಡಿದೆ. ಆರ್ಆರ್ ನಗರ, ಮಹಾದೇವಪುರ, ಯಲಹಂಕ, ಬೊಮ್ಮನಹಳ್ಳಿ ವಲಯಗಳಲ್ಲಿ ಕುಡಿಯುವ ನೀರಿನ ಪರೀಕ್ಷೆ ಮಾಡಿ ವರದಿ ನೀಡುವಂತೆ ಸೂಚಿಸಲಾಗಿದೆ. ಇದೇ ವೇಳೆ, ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಬಿಸಿ ನೀರು ಕೊಡಬೇಕು. ಬೀದಿಬದಿ ಆಹಾರ, ಕತ್ತರಿಸಿದ ಹಣ್ಣು ಮಾರಾಟ ನಿಷೇಧ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಹಾಲೋಜೆನ್ ಮಾತ್ರೆ ನೀಡಬೇಕು ಎಂದು ಹೇಳಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿ 2023ರ ನವೆಂಬರ್‌ನಲ್ಲಿ 1.84 ಕೋಟಿ ರೂ. ಹಣ ನೀಡಿ ಖರೀದಿಸಿರುವ 20 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಹಣದ ಮೂಲ ಪತ್ತೆ ಹಚ್ಚಿ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಗಂಗರಾಜು, ಸಿಎಂ ಸಿದ್ದರಾಮಯ್ಯ ಪತ್ನಿ ಓರ್ವ ಗೃಹಿಣಿಯಾಗಿದ್ದು, ಅವರಿಗೆ ಯಾವುದೇ ಬಾಹ್ಯ ಆದಾಯಗಳಿಲ್ಲ. ಆದಾಗ್ಯೂ ಅವರಿಗೆ ಇಷ್ಟು ಹಣ ಎಲ್ಲಿಂದ ಬಂತು. ಹೀಗಾಗಿ, ಈ ಪ್ರಕರಣದ ಕುರಿತು ನಾನು ಇಡಿ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಮುಡಾ ತನಿಖೆ ಜೊತೆಗೆ ಈ ಪ್ರಕರಣವನ್ನು ತೆಗೆದುಕೊಂಡರೆ ಅದರ ಸಂಪೂರ್ಣ ದಾಖಲಾತಿಯನ್ನು ಅವರಿಗೆ ನೀಡುತ್ತೇನೆ ಎಂದರು.
Advertisement