ವಿಜಯಪುರ, ಯಾದಗಿರಿ ಮತ್ತು ಧಾರವಾಡ ಜಿಲ್ಲೆಯ ಕೆಲವು ರೈತರಿಗೆ ಅವರ ಆಸ್ತಿ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿರುವ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದು ಯಾವುದೇ ರೈತರನ್ನು ಅವರ ಜಮೀನುಗಳಿಂದ ಒಕ್ಕಲೆಬ್ಬಿಸುವುದಿಲ್ಲ ಮತ್ತು ಅವರಿಗೆ ನೀಡಲಾದ ನೋಟಿಸ್ ಹಿಂಪಡೆಯಲಾಗುವುದು ಎಂದು ಹೇಳಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗುವುದು. 1973-74ರಲ್ಲಿ ಅಧಿಸೂಚನೆಯಾಗುವ ಪೂರ್ವದಲ್ಲಿನ ದಾಖಲೆಗಳನ್ನು ರೈತರು ಸಲ್ಲಿಸಿದರೆ, ಅಂತಹ ಅಧಿಸೂಚಿತ ಜಾಗಗಳನ್ನು ಕೈ ಬಿಡಲು ಸರಕಾರ ಸಿದ್ಧವಿದೆ ಎಂದು ಸಿಎಂ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ, ನಗರಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿತ್ತು. ರೈತರ ಅಹವಾಲು ಆಲಿಸಿ, ದಾಖಲೆ, ಮಾಹಿತಿಗಳನ್ನ ಸಂಗ್ರಹಿಸಿದ ಬಿಜೆಪಿ ತಂಡ, ಸಂಸದ ಗೋವಿಂದ ಕಾರಜೋಳ ನೇತೃತ್ವದ ತಂಡ ಡಿಸಿ ಟಿ ಭೂಬಾಲನ್ ಅವರನ್ನು ಭೇಟಿ ಮಾಡಿ ವಕ್ಫ ಸಚಿವ ಜಮೀರ್ ಅಹ್ಮದ್ ಖಾನ್ ನಡೆಸಿದ ಸಭೆಯ ಪ್ರೊಸೀಡಿಂಗ್ಸ್ ಕಾಪಿ ಕೇಳಿದ್ದಾರೆ. ನೋಟಿಸ್ ಕೊಡದೆ ಪಹಣಿಯಲ್ಲಿ ವಕ್ಫ್ ಹೆಸರು ಎಂಟ್ರಿ ಮಾಡಿದು ಏಕೆ ಎಂದು ಪ್ರಶ್ನಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭೂಬಾಲನ್, ಸಚಿವ ಜಮಿರ್ ಅಹಮ್ಮದ್ ಖಾನ್ ಅವರ ಸೂಚನೆ ಮೇರೆಗೆ ಒತ್ತುವರಿ ತೆರವು ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ವಕ್ಫ್ ಸಚಿವರು ಒತ್ತುವರಿ ಜಾಗ ತೆರವುಗೊಳಿಸುವಂತೆ ಹೇಳಿದ್ದರು. ಪ್ರತಿ ವರ್ಷವೂ ಗಣಕೀಕರಣ ಆಗಿವೆ. ನೋಟಿಸ್ ಕೊಡದೆಯೂ ಇಂದೀಕರಣ ಆದ ಉದಾಹರಣೆ ಇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಡಿಸಿಎಂ ಅನುದಾನ ಹಂಚಿಕೆ ಮಾಡಿರುವುದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಸರ್ಕಾರದ ಕ್ರಮಗಳು ಸೇಡಿನ ರಾಜಕಾರಣಕ್ಕೆ ಸಮಾನವಾಗಿದೆ, ಕಾಂಗ್ರೆಸ್‌ಗೆ ಮತ ಹಾಕದ ನಾಗರಿಕರನ್ನು ಸರ್ಕಾರ ಶಿಕ್ಷಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. “ಡಿಸಿಎಂ ಬ್ರಾಂಡ್ ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ. ಅವರ ಬ್ರಾಂಡ್ ಬೆಂಗಳೂರು ಕನಸು ಜಯನಗರವನ್ನು ಹೊರತುಪಡಿಸುತ್ತದೆಯೇ? ಎಂದು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಪ್ರಶ್ನಿಸಿದ್ದಾರೆ. ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಆದೇಶಕ್ಕೆ ಸ್ಪಷ್ಟನೆ ನೀಡಿದ್ದಾರೆ, ಕೆಲವು ಕಾರಣಗಳಿಂದ ಈ ಗೊಂದಲ ಉಂಟಾಗಿದೆ, ತಾರತಮ್ಯವಿಲ್ಲದೆ ಹಣ ಮಂಜೂರು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಸೆಟ್ ಗಾಗಿ ನೂರಾರು ಮರಗಳನ್ನು ಕಡಿದಿರುವುದು ಸ್ಯಾಟಲೈಟ್ ಫೋಟೋಗಳಿಂದ ಬಹಿರಂಗಗೊಂಡಿವೆ. HMT ವಶದಲ್ಲಿರುವ ಅರಣ್ಯ ಭೂಮಿಯಲ್ಲಿ 'ಟಾಕ್ಸಿಕ್' ಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ಸ್ಯಾಟಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯ ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಅವರ ಪುತ್ರ ಅಜಯ್ ಜೋಶಿ ಮತ್ತು ಬೆಂಗಳೂರಿನ ವಿಜಯಲಕ್ಷ್ಮಿ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಆರೋಪಿ ಗೋಪಾಲ್ ಜೋಶಿ ಅವರನ್ನು ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿದೆ. ಮಾಜಿ ಶಾಸಕ ದೇವಾನಂದ್ ಚವ್ಹಾಣ್ ಅವರ ಪತ್ನಿ ಸುನೀತಾ ಚವ್ಹಾಣ್ ನೀಡಿದ ದೂರಿನ ಮೇರೆಗೆ ಗೋಪಾಲ್ ಜೋಶಿ ಅವರನ್ನು ಬಂಧಿಸಲಾಗಿತ್ತು. ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ ಎರಡು ಕೋಟಿ ರೂಪಾಯಿ ಹಣ ಪಡೆದಿದ್ದರು. ಆದರೆ ಟಿಕೆಟ್ ಕೊಡಿಸದೆ ಆರೋಪಿಗಳು ವಂಚನೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.
ವಾಣಿಜ್ಯ ತೆರಿಗೆ ಸಂಗ್ರಹ ಗುರಿಯನ್ನು ತಲುಪುವಲ್ಲಿ ವಿಫಲರಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ವಾಣಿಜ್ಯ ತೆರಿಗೆ ಸಂಗ್ರಹದ ಪ್ರಗತಿ ಕುರಿತ ಪರಿಶೀಲನಾ ಸಭೆಯಲ್ಲಿ, ಮಾತನಾಡಿರುವ ಸಿಎಂ, ರಾಜ್ಯ 2024-25ಕ್ಕೆ 1,10,000 ಕೋಟಿ ರೂ.ಗಳ ವಾಣಿಜ್ಯ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಿದೆ. ರಾಜ್ಯದ ಅಭಿವೃದ್ಧಿಗೆ ಗುರಿ ಸಾಧಿಸುವುದು ಅತ್ಯಗತ್ಯ’ ಎಂದ ಸಿದ್ದರಾಮಯ್ಯ, ಸಮನ್ವಯದ ಪ್ರಯತ್ನದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
Advertisement