ಬೆಂಗಳೂರು: ಅನೇಕ ಮಂದಿ ಹೆಣ್ಣು ಮಕ್ಕಳು ನಮಗೆ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದೆ. ಉಚಿತ ಪ್ರಯಾಣ ಬೇಡ ಎಂದು ಟ್ವೀಟ್ ಹಾಗೂ ಇ-ಮೇಲ್ ಮೂಲಕ ವಿಚಾರ ತಿಳಿಸುತ್ತಿದ್ದಾರೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು
ವಿಧಾನಸೌಧದ ಮುಂಭಾಗ ಬುಧವಾರ ಐರಾವತ ಕ್ಲಬ್ ಕ್ಲಾಸ್ 2.0 ನೂತನ ಬಸ್ಸುಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಅವರು, ನಾವು ಹಣ ಕೊಡಲು ಮುಂದಾದರೂ, ಕಂಡಕ್ಟರ್ ಅವರು ಹಣ ತೆಗೆದುಕೊಳ್ಳುತ್ತಿಲ್ಲ ಎಂದು ಅನುಕೂಲ ಸ್ಥಿತಿಯಲ್ಲಿರುವ ಶೇ 5 ರಿಂದ 10 ರಷ್ಟು ಹೆಣ್ಣು ಮಕ್ಕಳು ಹೇಳುತ್ತಿದ್ದಾರೆ. ಶೀಘ್ರದಲ್ಲಿ ಇದರ ಬಗ್ಗೆ ನಾನು ರಾಮಲಿಂಗಾರೆಡ್ಡಿ ಅವರ ಜತೆ ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚೆ ನಡೆಸುತ್ತೇವೆ ಎಂದರು. ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕೆ ಎಸ್ ಆರ್ ಟಿ ಸಿ ಸಂಸ್ಥೆ ಹೆಸರು ಮಾಡಿದೆ. ಕಳೆದ ಒಂದು ವರ್ಷದಲ್ಲಿ 112 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಸಾಧನೆಗೆ ಸಂಸ್ಥೆಯ ನೌಕರರ ಶ್ರಮ ಕಾರಣ ಎಂದರು. ಐರಾವತ ಎಂದರೆ ಇಂದ್ರನ ವಾಹನ, ಆನೆ ಎಂದು ಅರ್ಥ. ಆನೆಯಂತೆ ಬಲಶಾಲಿ ಎಂದು ಅರ್ಥ. ವೋಲ್ವೋ ಸಂಸ್ಥೆಯ ಈ ಬಸ್ಸಿಗೆ 1.60 ಕೋಟಿ ಎಂದು ಸಂಸ್ಥೆಯವರು ಹೇಳಿದ್ದಾರೆ. ಇತ್ತೀಚಿಗೆ ನಾವು ಒಂದು ಕಾರು ತೆಗೆದುಕೊಳ್ಳಬೇಕು ಎಂದರೆ ಒಂದು ಕೋಟಿ ಮೀರುತ್ತದೆ ಎಂದರು.
ಕೆಎಸ್ಆರ್ ಟಿಸಿ ಪ್ರಾರಂಭವಾದಾಗ ಕೇವಲ 120 ಬಸ್ ಗಳು ಇದ್ದವು, ಇಂದು 24,282 ಬಸ್ ಗಳು ಇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 6,200 ಬಸ್ ಗಳ ಖರೀದಿಗೆ ಮುಂದಾಗಿದೆ. ಇದರಲ್ಲಿ 3,400 ಬಸ್ ಗಳನ್ನು ಖರೀದಿ ಮಾಡಲಾಗಿದೆ. ಸುಮಾರು 9 ಸಾವಿರ ಡ್ರೈವರ್ ಹಾಗೂ ಕಂಡಕ್ಟರ್ ಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ ಎಂದರು. ಅನುಕಂಪದ ಆಧಾರದ ಮೇಲೆ ಒಂದು ಸಾವಿರಕ್ಕೂ ಹೆಚ್ಚು ನೌಕರರ ಕುಟುಂಬಸ್ಥರಿಗೆ ಉದ್ಯೋಗ ನೀಡಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದ ನೌಕರರ ಕುಟುಂಬದವರಿಗೆ ಒಂದು ಕೋಟಿ ರೂ. ಪರಿಹಾರ ನೀಡಲಾಗಿದೆ. ಇಡೀ ಭಾರತದಲ್ಲಿಯೇ ಇಲ್ಲದ ಅತ್ಯುತ್ತಮವಾದ ವ್ಯವಸ್ಥೆ ನಮ್ಮಲ್ಲಿದೆ ಎಂದರು.
ಕರ್ನಾಟಕ ಸಾರಿಗೆ ಸಂಸ್ಥೆಯನ್ನು ವ್ಯವಹಾರಕ್ಕಾಗಿ ಹುಟ್ಟಿಹಾಕಿಲ್ಲ. ನಾಗರಿಕರ ಸೇವೆಗಾಗಿ ಇದನ್ನು ಮೀಸಲಿಡಲಾಗಿದೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ, ಇಂಧನ ಬೆಲೆ ಹೆಚ್ಚಾದ ತಕ್ಷಣ ಟಿಕೆಟ್ ದರವೂ ಹೆಚ್ಚಾಗಬೇಕು ಎನ್ನುವ ನಿಯಮ ಮಾಡಲಾಗಿತ್ತು ಎಂದರು. ಸಂಸ್ಥೆಯಲ್ಲಿ ಈಗ ಶಿಸ್ತು ಬಂದಿದೆ. ಚಾಲಕರು ನಿಯಮಕ್ಕೆ ಅನುಸಾರವಾಗಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಸುಮಾರು 1.80 ಕೋಟಿ ಜನರು ಪ್ರಯಾಣ ಮಾಡುತ್ತಿದ್ದಾರೆ ಎಂದರು.
ಕೆಎಸ್ ಆರ್ ಟಿಸಿ ಸಂಸ್ಥೆ ಇದ್ದರೆ ಸರ್ಕಾರಕ್ಕೆ ಒಳ್ಳೆಯ ಹೆಸರು. ಖಾಸಗಿಯವರು ಸಂಸ್ಥೆಗೆ ಡಿಸೇಲ್ ಅನ್ನು ಕಡಿಮೆ ದರದಲ್ಲಿ ನೀಡುತ್ತೇವೆ ಎಂದು ಮುಂದೆ ಬಂದಿದ್ದಾರೆ. ಇದರ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದು ಮುಂದುವರೆಯಲಾಗುವುದು ಎಂದರು.
ನಾನು ಈ ಹಿಂದೆ ಶಾಸಕನಾಗಿದ್ದಾಗ ಎರಡು ಮೂರು ಸಲ ಐರಾವತ ಬಸ್ ನಲ್ಲಿ ಪ್ರಯಾಣ ಮಾಡಿದ್ದೆ. ಇಂದು ಲೋಕಾರ್ಪಣೆಯಾಗಿರುವ ಐರಾವತ ಬಸ್ ನೋಡುತ್ತಿದ್ದರೆ ಬಹಳ ಸಂತೋಷವಾಗುತ್ತಿದೆ. ಚುನಾವಣೆ ಸಮಯದಲ್ಲಿ ಪ್ರಚಾರಕ್ಕಾಗಿ ಇದೇ ಬಸ್ ಗಳನ್ನು ಬಳಸಲಾಗುತ್ತಿತ್ತು. ಅವಕಾಶ ಸಿಕ್ಕಾಗ ನಾನು ಐರಾವತ ಬಸ್ ನಲ್ಲಿ ದೂರ ಪ್ರಯಾಣ ಮಾಡುವೆ. ರಾಮಲಿಂಗಾರೆಡ್ಡಿಯವರೇ ನಮಗೂ ಪ್ರಯಾಣ ಮಾಡಲು ಒಂದು ಅವಕಾಶ ಒದಗಿಸಿ ಕೊಡಿ ಎಂದರು. ರಾಮಲಿಂಗಾರೆಡ್ಡಿ ಅವರು ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಜವಾಬ್ದಾರಿ ವಹಿಸಿಕೊಂಡು, ಕಾಂಗ್ರೆಸ್ ಸರ್ಕಾರಕ್ಕೆ ಉತ್ತಮ ಹೆಸರು ಬರುವಂತೆ ಕೆಲಸ ಮಾಡುತ್ತಿದ್ದಾರೆ. ಸಾರಿಗೆ ವ್ಯವಸ್ಥೆಯಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.
Advertisement