ರಾಜ್ಯ ಸರ್ಕಾರ 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ 69 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಘೋಷಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಜಿ ಸಚಿವೆ ಬಿ.ಟಿ. ಲಿಲಿತಾ ನಾಯಕ್, ಅಲ್ಲಮಪ್ರಭು ಬೆಟ್ಟದೂರು. ಡಾ. ಎಂ. ವೀರಪ್ಪ ಮೊಯಿಲಿ. ಹನುಮಂತರಾವ್ ದೊಡ್ಡಮನಿ, ಡಾ. ಬಾಳಾಸಾಹೇಬ್ ಲೋಕಾಪುರ, ಬೈರಮಂಗಲ ರಾಮೇಗೌಡ. ಡಾ. ಪ್ರಶಾಂತ್ ಮಾಡ್ತಾಗೆ ಪ್ರಶಸ್ತಿ ಘೋಣೆಯಾಗಿದ್ದರೆ, ಶಿಕ್ಷಣ ಕ್ಷೇತ್ರದಲ್ಲಿ ಡಾ. ವಿ. ಕಮಲಮ್ಮ, ಡಾ. ರಾಜೇಂದ್ರ ಶೆಟ್ಟಿ., ಡಾ. ಪದ್ಮಾ ಶೇಖರ್ ಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಶಿಲ್ಪಕಲೆ ಕ್ಷೇತ್ರದಲ್ಲಿ ಅರುಣ್ ಯೋಗಿರಾಜ್, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರೊ. ಟಿ.ವಿ. ರಾಮಚಂದ್ರ, ಸುಬ್ಬಯ್ಯ ಅರುಣನ್ ಗೆ ಪ್ರಶಸ್ತಿ ಲಭಿಸಿದೆ. ಮಾಧ್ಯಮ ವಿಭಾಗದಲ್ಲಿ ಎನ್.ಎಸ್. ಶಂಕರ್, ಸನತ್ ಕುಮಾರ್ ಬೆಳಗಲಿ, ಎ.ಜಿ. ಕಾರಟಗಿ, ರಾಮಕೃಷ್ಣ ಬಡಶೇಶಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್ ಗೆ ಆರೋಗ್ಯ ಸಮಸ್ಯೆ ಇರುವುದರಿಂದ ಚಿಕಿತ್ಸೆ ಪಡೆಯುವುದಕ್ಕೆ ಅನುವುಮಾಡಿಕೊಡಲು 45 ದಿನಗಳ ಕಾಲದ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಪ್ರತಿ ವಾರವೂ ನಟ ದರ್ಶನ್ ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ವಿವರವನ್ನು ಕೋರ್ಟ್ ಗೆ ನೀಡಲು ಸೂಚಿಸಿದೆ. ದರ್ಶನ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ತಮ್ಮನ್ನು ಬ್ಲಾಕ್ ಮೇಲರ್ ಎಂದು ಹೇಳಿದ್ದಕ್ಕೆ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ಟಿಜೆ ಅಬ್ರಾಹಂ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಸಿಎಂ ಕೆಲವು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಅವರು ನನ್ನನ್ನು ಬ್ಲ್ಯಾಕ್‌ಮೇಲರ್ ಮತ್ತು ಕೆಟ್ಟ ಪೂರ್ವಾಪರ ಹೊಂದಿರುವ ವ್ಯಕ್ತಿ ಎಂದು ಕರೆದಿದ್ದಾರೆ ಎಂದು ಟಿಜೆ ಅಬ್ರಾಹಂ ಆರೋಪಿಸಿದ್ದಾರೆ.
ಶಕ್ತಿ ಯೋಜನೆ ಬಗ್ಗೆ ಸರ್ಕಾರ ಮರುಚಿಂತನೆ ನಡೆಸುವ ಸುಳಿವನ್ನು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದಾರೆ. ವಿಧಾನಸೌಧದ ಮುಂಭಾಗ ಬುಧವಾರ ಐರಾವತ ಕ್ಲಬ್ ಕ್ಲಾಸ್ 2.0 ನೂತನ ಬಸ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರುವ ಡಿಕೆ ಶಿವಕುಮಾರ್, ಅನೇಕ ಮಂದಿ ಹೆಣ್ಣು ಮಕ್ಕಳು ನಮಗೆ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದೆ. ಉಚಿತ ಪ್ರಯಾಣ ಬೇಡ ಎಂದು ಟ್ವೀಟ್ ಹಾಗೂ ಇ-ಮೇಲ್ ಮೂಲಕ ವಿಚಾರ ತಿಳಿಸುತ್ತಿದ್ದಾರೆ. ಶೀಘ್ರದಲ್ಲಿ ಇದರ ಬಗ್ಗೆ ನಾನು ರಾಮಲಿಂಗಾರೆಡ್ಡಿ ಅವರ ಜತೆ ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 3,400 ಬಸ್ ಗಳನ್ನು ಖರೀದಿ ಮಾಡಲಾಗಿದೆ ಎಂದು ಡಿಸಿಎಂ ಇದೇ ವೇಳೆ ತಿಳಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನ ಬಂಡಾಯ ಕೊನೆಗೂ ಇತ್ಯರ್ಥವಾಗಿದೆ. ಬಂಡಾಯ ಅಭ್ಯರ್ಥಿ ಸೈಯದ್ ಅಜ್ಜಂಪೀರ್ ಖಾದ್ರಿ ಪಕ್ಷೇತರರಾಗಿ ಸಲ್ಲಿಸಿದ್ದ ನಾಮಪತ್ರ ವಾಪಸು ಪಡೆದಿದ್ದಾರೆ. ಬೆಂಗಳೂರಿನಿಂದ ಮಂಗಳವಾರ ರಾತ್ರಿ ಹುಬ್ಬಳ್ಳಿಗೆ ಬಂದಿದ್ದ ಖಾದ್ರಿ, ಸಚಿವರಾದ ಜಮೀರ್ ಅಹ್ಮದ್ ಹಾಗೂ ಶಿವಾನಂದ ಪಾಟೀಲ ಜೊತೆಯಲ್ಲಿ ಬುಧವಾರ ಬೆಳಿಗ್ಗೆ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅಜ್ಜಂಪೀರ್ ಖಾದ್ರಿ ಅವರು ಪಕ್ಷದ ಮುಂದೆ ನಾನು ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ. ನಾನು ಸಿದ್ದರಾಮಯ್ಯ ಅವರ ಶಿಷ್ಯ. ಅವರ ಮಾರ್ಗದರ್ಶನದಲ್ಲಿ ಮುಂದುವರಿಯುವೆ ಎಂದು ಹೇಳಿದರು.
ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಕಸ ಸುಡುತ್ತಿದ್ದ ಪುರಾತತ್ವ ಇಲಾಖೆ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ASI ರಕ್ಷಿತ ಸ್ಮಾರಕವಾದ ಗೆಜ್ಜಲ್ ಮಂಟಪದ ಬಳಿ ಕಸವನ್ನು ಸುಡುವ ಮೂಲಕ ASI ಸಿಬ್ಬಂದಿ ತಮ್ಮದೇ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾರೆ. ಸಂರಕ್ಷಿತ ಸ್ಮಾರಕಗಳ ಬಳಿ ಬೆಂಕಿ ಹಚ್ಚುವುದನ್ನು ನಿಷೇಧಿಸಲಾಗಿದೆ. ಇದು ಮೊದಲ ಬಾರಿ ಅಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
Advertisement