
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕೋವಿಡ್ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಜಸ್ಟಿನ್ ಜಾನ್ ಮೈಕಲ್ ಡಿ. ಕುನ್ಹಾ ನೇತೃತ್ವದ ಆಯೋಗ ವರದಿಯನ್ನು ಸಲ್ಲಿಕೆ ಮಾಡಿದೆ. ಹೀಗಾಗಿ ಬಿಜೆಪಿಗರಲ್ಲಿಆತಂಕ ಶುರುವಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಅನ್ನು ನಿಭಾಯಿಸುವಲ್ಲಿ 7,000 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಆರೋಪಿಸಿರುವ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಆಯೋಗವು ತನ್ನ ಮಧ್ಯಂತರ ವರದಿಯನ್ನು ಶನಿವಾರ ಇಲ್ಲಿ ಸರ್ಕಾರಕ್ಕೆ ಸಲ್ಲಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿರುದ್ಧ ಅಕ್ರಮ ನಡೆಸಿರುವ ಆರೋಪ ಮಾಡಲಾಗಿದೆ. ವೆಂಟಿಲೇಟರ್, ಆಕ್ಸಿಜನ್ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೋವಿಡ್-19 ನಿರ್ವಹಣಾ ಉಪಕರಣಗಳು, ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‌ಗಳ ಖದೀದಿ ಮತ್ತು ಸಂಗ್ರಹಣೆಯಲ್ಲಿ ಅಕ್ರಮ ನಡೆದ ಆರೋಪಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲಾಗಿದೆ.
ಕೋವಿಡ್ ಹಗರಣದ ತನಿಖೆಯನ್ನು ನಡೆಸಲು ರಾಜ್ಯ ಸರ್ಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ. ಕುನ್ಹಾ ನೇತೃತ್ವದ ಆಯೋಗವನ್ನು 2023 ಆಗಸ್ಟ್‌ನಲ್ಲಿ ರಚಿಸಿತ್ತು. ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು 2024ರ ಮೇ 25ಕ್ಕೆ ಮೊದಲು ತಿಳಿಸಿತ್ತು. ಆ ಬಳಿಕ ತನಿಖೆಯ ಅವಧಿಯನ್ನು ಆಯೋಗವು ವಿಸ್ತರಣೆ ಕೋರಿದ್ದರಿಂದ ಆಗಸ್ಟ್ 31ಕ್ಕೆ ಸರ್ಕಾರವು ವಿಸ್ತರಿಸಿತ್ತು.
ಪೂರ್ಣ ವರದಿಯನ್ನು ಸಲ್ಲಿಸಲು ಆಯೋಗವು ತನ್ನ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸುವಂತೆ ಕೋರಿದೆ. ಆದರೆ ಮಧ್ಯಂತರ ವರದಿಯಲ್ಲಿನ ಶಿಫಾರಸುಗಳನ್ನು ಪರಿಶೀಲಿಸಲು ಸರ್ಕಾರವು ಸಂಪುಟ ಉಪಸಮಿತಿಯನ್ನು ರಚಿಸುತ್ತದೆಯೇ ಅಥವಾ ಮುಂದಿನ ಕ್ರಮಕ್ಕಾಗಿ ಸಂಪುಟದ ಮುಂದೆ ಇಡುತ್ತದೆಯೇ ಎಂದು ನೋಡಬೇಕು
ವೆಂಟಿಲೇಟರ್‌ಗಳ ಖರೀದಿ, ಆಕ್ಸಿಜನ್ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೋವಿಡ್-19 ನಿರ್ವಹಣಾ ಉಪಕರಣಗಳು, ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‌ಗಳ ಖರೀದಿ ಮತ್ತು ಸಂಗ್ರಹಣೆಯಲ್ಲಿ ಲೋಪ, ಅಕ್ರಮಗಳ ಆರೋಪ ಕೇಳಿ ಬಂದಿತ್ತು. ಆಗ ಸಿಎಂ ಆಗಿ ಯಡಿಯೂರಪ್ಪ ರಾಜ್ಯದಲ್ಲಿ ಅಧಿಕಾರದಲ್ಲಿದ್ದರು. ಈ ವೇಳೆ ಈಗಿನ ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ಅಂದಿನ ಆರೋಗ್ಯ ಸಚಿವರಾಗಿದ್ದರು.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತನಿಖಾ ವರದಿಯನ್ನು ಸಿಎಂ ಅವರಿಗೆ ಸಲ್ಲಿಸುವ ವೇಳೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.
Advertisement