ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಮತ್ತು ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಕಾಂಗ್ರೆಸ್ ಮನವಿಗೆ ರಾಜಭವನ ಪ್ರತಿಕ್ರಿಯೆ ನೀಡಿದೆ. ಕಾಂಗ್ರೆಸ್ ಆಗ್ರಹಕ್ಕೆ ಸ್ಪಷ್ಟನೆ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಮ್ಮ ಕಚೇರಿಯಲ್ಲಿ ಪ್ರಾಸಿಕ್ಯೂಷನ್ ಗೆ ಮನವಿ ಮಾಡಿರುವ ಯಾವುದೇ ಪತ್ರಗಳು ಬಾಕಿ ಉಳಿದಿಲ್ಲ ಎಂದು ಹೇಳಿದ್ದಾರೆ.
ರಾಜ್ಯಪಾಲರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರಾಜ್ಯಪಾಲರ ಬಳಿ ಯಾವುದೇ ಪ್ರಕರಣಗಳು ಬಾಕಿ ಉಳಿದಿಲ್ಲ ಎಂದು ಹೇಳಿದ್ದಾರೆ. ಆದರೆ, ರಾಜ್ಯಪಾಲರು ಏಕೆ ಹೀಗೆ ಹೇಳುತ್ತಿದ್ದಾರೆಂಬುದರ ಕುರಿತು ಪರಿಶೀಲನೆ ನಡೆಸಲಾಗುವುದು. ಇದು ನಿಜವೋ,ಸುಳ್ಳೋ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ. ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜಭವನ ಚಲೋ ನಡೆಸಿದ್ದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಅನುಮತಿ ನೀಡಬೇಕೆಂದು ಮನವಿ ಪತ್ರ ಸಲ್ಲಿಸಿತ್ತು.
ಕಲಬುರಗಿ ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಭಾರಿ ಮಳೆ ಸುರಿಯುತ್ತಿದು, ರಾಜ್ಯದ ಹೆಮ್ಮೆಯ ಐತಿಹಾಸಿಕ ಸ್ಮಾರಕ ಮಳಖೇಡ ರಾಷ್ಟ್ರಕೂಟ ಕೋಟೆಯ ಗೋಡೆ ಕುಸಿದು ಬಿದ್ದಿದೆ. ಮಳೆಯಿಂದಾಗಿ ಕೋಟೆಯ ಗೋಡೆಗಳಲ್ಲಿ ನೀರು ನಿಂತಿದೆ. ಕೋಟೆ ಗೋಡೆಗಳು ತೇವಗೊಂಡು ಮಣ್ಣು ಸಡಿಲವಾಗಿದ್ದು ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಇನ್ನು ಗೋಡೆ ಕುಸಿತ ಪ್ರಕರಣದಿಂದ ಕೋಟೆ ಅಕ್ಕಪಕ್ಕದ ನಿವಾಸಿಗಳು ಆತಂಕಗೊಂಡಿದ್ದಾರೆ. ಐತಿಹಾಸಿಕ ಚರೀತ್ರೆಯುಳ್ಳ ಮಳಖೇಡ ಕೋಟೆಯನ್ನು 2016-18ರ ಅವಧಿಯಲ್ಲಿ ಸರ್ಕಾರ ಜೀರ್ಣೋದ್ಧಾರ ಮಾಡಿತ್ತು. ಹಳೆ ಗೋಡೆಗಳು ಹಾಗೆಯೇ ಇದ್ದು ಜೀರ್ಣೋದ್ಧಾರ ಮಾಡಿದ ಗೋಡೆ ಕುಸಿದು ಬಿದ್ದಿರುವುದು ಅಚ್ಚರಿ ಮೂಡಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ಆರೋಪದ ಸಂಬಂಧ ಜಸ್ಟಿನ್ ಜಾನ್ ಮೈಕಲ್ ಡಿ. ಕುನ್ಹಾ ನೇತೃತ್ವದ ಆಯೋಗ ತನ್ನ ತನಿಖಾ ವರದಿಯನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಸಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಅನ್ನು ನಿಭಾಯಿಸುವಲ್ಲಿ 7,000 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಆಯೋಗ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ. ವೆಂಟಿಲೇಟರ್, ಆಕ್ಸಿಜನ್ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೋವಿಡ್-19 ನಿರ್ವಹಣಾ ಉಪಕರಣಗಳು, ರಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‌ಗಳ ಖದೀದಿ ಮತ್ತು ಸಂಗ್ರಹಣೆಯಲ್ಲಿ ಅಕ್ರಮ ನಡೆದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2023 ಆಗಸ್ಟ್‌ನಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ. ಕುನ್ಹಾ ನೇತೃತ್ವದ ಆಯೋಗವನ್ನು ರಚಿಸಿತ್ತು.
ಯುವಕರು ಹಾಗೂ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿರುವ ಆನ್ಲೈನ್ ಗೇಮ್, ಬೆಟ್ಟಿಂಗ್ ಆ್ಯಪ್ಗಳನ್ನ ನಿಷೇಧಿಸುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರ ಬರೆದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅನೇಕ ಆನ್ಲೈನ್ ಗೇಮ್ಗಳನ್ನ ನಿಷೇಧಿಸಲಾಗಿತ್ತು. ಆನ್ ಲೈನ್ ಗೇಮ್ಗೆ ಅಡಿಕ್ಟ್ ಆಗಿ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಆದ್ರೆ, ಆನ್ಲೈನ್ ಗೇಮ್ ಮಾಲೀಕರು ಲಾಭ ಪಡೆಯುತ್ತಿದ್ದಾರೆ. ಇದಕ್ಕೆ ಆದಷ್ಟು ಬೇಗ ಕಡಿವಾಣ ಹಾಕಿ ಎಂದು ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ.
BBMP ವ್ಯಾಪ್ತಿಯ ಕಾಮಗಾರಿಗಳ ಶೇ.25ರಷ್ಟು ಬಿಲ್ ಬಾಕಿ ಹಿನ್ನೆಲೆ ಬಿಬಿಎಂಪಿ ಗುತ್ತಿಗೆದಾರರು ನಾಳೆಯಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ಕಳೆದ 2 ವರ್ಷದಿಂದ ಬರೋಬ್ಬರಿ 1,600 ಕೋಟಿ ರೂ. ಹಣವನ್ನು ಪಾಲಿಕೆ ಬಾಕಿ ಉಳಿಸಿಕೊಂಡಿದೆ. ಶೇ.75ರಷ್ಟು ಕಾಮಗಾರಿ ಬಿಲ್ ಮಾತ್ರ ಪಾಲಿಕೆ ಪಾವತಿಸಿದ್ದು, ಉಳಿದ ಶೇಕಡಾ 25ರಷ್ಟು ಬಿಲ್ ಪಾವತಿಗೆ ಗುತ್ತಿಗೆದಾರರು ಒತ್ತಾಯಿಸಿದ್ದಾರೆ. ನಾಳೆಯಿಂದ ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ ಹಿನ್ನೆಲೆ ಬೆಂಗಳೂರಿನಲ್ಲಿ ಪಾಲಿಕೆ ಕಾಮಗಾರಿಗಳಿಗೆ ಬ್ರೇಕ್ ಬೀಳಲಿದೆ.
ಇನ್ನು ಬಿಬಿಎಂಪಿ ವ್ಯಾಪ್ತಿಯ ರಸ್ತೆಗುಂಡಿಗಳನ್ನು ಇನ್ನೂ 15 ದಿನಗಳ ಒಳಗಾಗಿ ಮುಚ್ಚಿ ದುರಸ್ತಿ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಗಡುವು ವಿಧಿಸಿದ್ದಾರೆ. 15 ದಿನಗಳ ನಂತರ ಇಡೀ ಬೆಂಗಳೂರು ನಗರವನ್ನು ತಾವೇ ಸ್ವತಃ ಪ್ರದಕ್ಷಿಣೆ ಹಾಕಲಿದ್ದು, ಪ್ರತಿ ರಸ್ತೆಗಳನ್ನು ಪರಿಶೀಲನೆ ಮಾಡುತ್ತೇನೆ ಎಂದು ಡಿಸಿಎಂ ತಿಳಿಸಿದ್ದಾರೆ.
Advertisement