
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ (Chamundeshwari Development Authority) ಸಭೆಯಲ್ಲಿ ಭಾಗವಹಿಸಲು ಮೈಸೂರಿಗೆ ಇಂದು ಮಂಗಳವಾರ ಆಗಮಿಸಿದ್ದಾರೆ. ಅದಕ್ಕೂ ಮುನ್ನ ಅವರು ಮೈಸೂರು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿ ದರ್ಶನ ಮಾಡಿದ್ದಾರೆ.
ಈ ಸಭೆಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಯದುವಂಶದ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಪ್ರಾಧಿಕಾರದ ಸಭೆಯನ್ನು ಕಾನೂನಾತ್ಮಕವಾಗಿ ಮಾಡುತ್ತಿದ್ದೇನೆ. ಯಾರದ್ದೋ ಹೇಳಿಕೆ ಆಧರಿಸಿ ಸಭೆ ಮಾಡಲು ಆಗುವುದಿಲ್ಲ. ಸಭೆ ಮುಂದೂಡಲು ಸಾಧ್ಯವಿಲ್ಲ ಎಂದರು. ಯದುವೀರ್ ಹೇಳಿಕೆ ಮುಖ್ಯವೋ ಕಾನೂನು ಮುಖ್ಯವೋ? ನಾನು ಕಾನೂನು ಪ್ರಕಾರವೇ ಇವತ್ತಿನ ಸಭೆ ಮಾಡುತ್ತಿದ್ದೇನೆ. ಕೋರ್ಟ್ನಲ್ಲಿ ತಡೆಯಾಜ್ಞೆ ತೆರವು ಆಗಿದ್ದಕ್ಕೆ ಸಭೆ ಮಾಡುತ್ತಿದ್ದೇನೆ ಎಂದರು.
ಮುಡಾ ಮಾಜಿ ಆಯುಕ್ತ ದಿನೇಶ್ ಅಮಾನತು ವಿಚಾರ ಗೊತ್ತಿಲ್ಲ. 2009ರ ಹಿಂದಿನ ಬಡಾವಣೆಗೆ 50:50 ಬದಲಿ ನಿವೇಶನ ಅನ್ವಯ ಆಗುವುದಿಲ್ಲ. ಈ ಅಂಶ ಉಲ್ಲೇಖದ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಡಾ ಆದೇಶದ ಅಂಶಗಳು ಏನು ಎಂಬುದು ಸಹ ಗೊತ್ತಿಲ್ಲ. ಗೊತ್ತಿಲ್ಲದನ್ನು ನಾನು ಹೇಗೆ ವಿವರವಾಗಿ ಹೇಳಲಿ. ಆದೇಶದಲ್ಲಿ ಏನಿದೆ ಎಂದು ನೋಡಿಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ: ಕೊರೊನಾ ಹಗರಣದ ಮಧ್ಯಂತರ ವರದಿಯನ್ನು ಮುಂದಿನ ಸಚಿವ ಸಂಪುಟದ ಮುಂದೆ ಮಂಡಿಸುತ್ತೇನೆ. ಸಂಪುಟದಲ್ಲಿ ಚರ್ಚೆ ಮಾಡಿ ಮುಂದಿನ ತೀರ್ಮಾನ ಹೇಳುತ್ತೇನೆ. ವರದಿಯಲ್ಲಿ ಏನಿದೆ ಎಂಬುದನ್ನು ನಾನು ನೋಡಿಲ್ಲ. ಎಷ್ಟು ಪ್ರಮಾಣದ ಭ್ರಷ್ಟಾಚಾರ ಆಗಿದೆ ಎಂಬುದು ಗಮನಕ್ಕೆ ಬಂದಿಲ್ಲ. ನನ್ನ ಗಮನಕ್ಕೆ ಬರದೆ ಸುಧಾಕರ್ಗೆ ಮಾಹಿತಿ ಕೊಟ್ಟವರು ಯಾರು? ಕುಂಬಳಕಾಯಿ ಕಳ್ಳ ಅಂದ್ರೆ ಏಕೆ ಹೆಗಲು ಮುಟ್ಟಿಕೊಳ್ಳಬೇಕು? ಸುಧಾಕರ್ ಗೆ ತಪ್ಪು ಮಾಡಿರುವುದು ಮಾನಸಿಕವಾಗಿ ಗೊತ್ತಿದೆ. ಹೀಗಾಗಿ ಅವನು ಆ ರೀತಿ ಮಾತನಾಡುತ್ತಿದ್ದಾನೆ ಎಂದರು.
ವೇತನ ಬಾಕಿ ಇಲ್ಲ: ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಆಗದ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಮಾಹಿತಿ ಪಡೆಯುತ್ತೇನೆ. ಆದರೆ, ನಾವು ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ. ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.
ಇನ್ನು ಸಿದ್ದರಾಮಯ್ಯನವರು ಒಪ್ಪಿಗೆ ಕೊಟ್ಟರೆ ಮುಖ್ಯಮಂತ್ರಿಯಾಗುತ್ತೇನೆ ಎಂಬ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಎಂ ಆಗಲು ಪರ್ಮಿಷನ್ ಕೊಡೋದಿಕ್ಕೆ ನಾನ್ಯಾರು, ಅದು ಪಕ್ಷದ ಶಾಸಕರು ಮತ್ತು ಹೈಕಮಾಂಡ್ ಗೆ ಬಿಟ್ಟ ತೀರ್ಮಾನ ಎಂದು ನಗುತ್ತಾ ಹೇಳಿದರು.
ಇದಕ್ಕೂ ಮುನ್ನ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೈಸೂರಿನ ಅರಮನೆ ಮೈದಾನದಲ್ಲಿ "ಕನ್ನಡ ಸುವರ್ಣ ಸಂಭ್ರಮ ರಥ" ಕ್ಕೆ ಚಾಲನೆ ನೀಡಿ, ಅಭಿಯಾನ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ರಾಜ್ಯವು ಕರ್ನಾಟಕವೆಂದು ನಾಮಕರಣಗೊಂಡು ಐದು ದಶಕಗಳು ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಸುವರ್ಣ ಸಂಭ್ರಮ ರಥಕ್ಕೆ ಚಾಲನೆ ನೀಡಲಾಗಿದೆ.
Advertisement