ಡೆಂಗ್ಯೂ ಸಾಂಕ್ರಾಮಿಕ ರೋಗ: ಮಾರ್ಗಸೂಚಿ ಪಾಲಿಸದಿದ್ದರೆ ದಂಡ; ಚಾಮುಂಡಿಬೆಟ್ಟದಲ್ಲಿ ಮದ್ಯಪಾನ, ಗುಟ್ಕಾ, ಮೊಬೈಲ್ ನಿಷೇಧ; ಮುಡಾ ಹಗರಣದಲ್ಲಿ ಮೊದಲ ತಲೆದಂಡ! ಇವು ಇಂದಿನ ಪ್ರಮುಖ ಸುದ್ದಿಗಳು 03-09-24

ಡೆಂಗ್ಯೂ ಸಾಂಕ್ರಾಮಿಕ ರೋಗ: ಮಾರ್ಗಸೂಚಿ ಪಾಲಿಸದಿದ್ದರೆ ದಂಡ; ಚಾಮುಂಡಿಬೆಟ್ಟದಲ್ಲಿ ಮದ್ಯಪಾನ, ಗುಟ್ಕಾ, ಮೊಬೈಲ್ ನಿಷೇಧ; ಮುಡಾ ಹಗರಣದಲ್ಲಿ ಮೊದಲ ತಲೆದಂಡ! ಇವು ಇಂದಿನ ಪ್ರಮುಖ ಸುದ್ದಿಗಳು 03-09-24

1. ಡೆಂಗ್ಯೂ ಸಾಂಕ್ರಾಮಿಕ ರೋಗ: ಮಾರ್ಗಸೂಚಿ ಪಾಲಿಸದಿದ್ದರೆ ದಂಡ

ರಾಜ್ಯದಲ್ಲಿ ಡೇಂಗ್ಯೂ ಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಡೆಂಗ್ಯು ಜ್ವರವನ್ನು ಸಾಂಕ್ರಾಮಿಕ ರೋಗವೆಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಈ ಕುರಿತು ರಾಜ್ಯ ಸರ್ಕಾರದಿಂದ ಗೆಜೆಟ್ ಪ್ರಕಟಿಸಲಾಗಿದ್ದು, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಅಡಿಯಲ್ಲಿ ಡೆಂಗ್ಯೂ ಜ್ವರವನ್ನು ಸಾಂಕ್ರಾಮಿಕ ರೋಗ ಎಂದು ಅಧಿಸೂಚನೆ ಹೊರಡಿಸಲಾಗಿದೆ. ತೀವ್ರ ತಲೆನೋವು, ಕೀಲು ಮತ್ತು ಸ್ನಾಯು ನೋವು, ರಕ್ತಸ್ರಾವ ಮತ್ತು ವಾಕರಿಕೆ ಕಾಣಿಸಿಕೊಳ್ಳುವುದು ಡೆಂಗ್ಯೂ ರೋಗದ ಪ್ರಮುಖ ಲಕ್ಷಣಗಳಾಗಿದೆ. ಡೆಂಗ್ಯು ಜ್ವರವನ್ನು ತಡೆಯಲು ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಆದರೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಬಿಬಿಎಂಪಿ ಸೂಚಿಸಿದೆ. ಡೆಂಗ್ಯು ನಿಯಂತ್ರಣಕ್ಕೆ ನಿಗದಿತ ಮಾರ್ಗಸೂಚಿಗಳನ್ನು ಹೊರಡಿಸಿರುವ ರಾಜ್ಯ ಸರ್ಕಾರ, ಅವನ್ನು ಪಾಲಿಸದೇ ಇದ್ದಲ್ಲಿ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿದೆ. ನಗರ ಪ್ರದೇಶದಲ್ಲಿ 400 ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 200 ರೂ. ದಂಡ ನಿಗದಿಪಡಿಸಿದ್ದರೆ, ನಗರ ಪ್ರದೇಶಗಳ ಕಚೇರಿಗಳು, ಶಾಲಾ-ಕಾಲೇಜುಗಳು, ಹೋಟೆಲ್‌ಗಳಂತಹ ಇತರ ಸ್ಥಳಗಳು ಸೇರಿದಂತೆ ವಾಣಿಜ್ಯ ಸಂಸ್ಥೆಗಳು 1,000 ರೂ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 500 ರೂ ದಂಡವನ್ನು ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

2. ಚಾಮುಂಡಿ ಬೆಟ್ಟದಲ್ಲಿ ಮದ್ಯಪಾನ, ಗುಟ್ಕಾ, ಮೊಬೈಲ್ ನಿಷೇಧ

ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಇಂದು ಚಾಮುಂಡಿ ಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿ ದರ್ಶನ ಪಡೆದು ಬಳಿಕ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿಬೆಟ್ಟದಲ್ಲಿ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ. ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ, ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧಿಸಲಾಗಿದೆ. ಅಲ್ಲದೇ ಚಾಮುಂಡೇಶ್ವರಿ ದರ್ಶನದ ವೇಳೆ ಮೊಬೈಲ್ ಬಳಕೆ ಸಹ ನಿಷೇಧ ಮಾಡಲಾಗಿದೆ ಎಂದು ತಿಳಿಸಿದರು. ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಉನ್ನತ ಮಟ್ಟದ ಆರೋಗ್ಯಕರ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಚಾಮುಂಡಿ ಬೆಟ್ಟದ ಅಭಿವೃದ್ಧಿ ದೃಷ್ಟಿಯಿಂದ ಪ್ರಾಧಿಕಾರ ರಚನೆ ಮಾಡಿದ್ದೇವೆ. ಅಪರಾಧ ತಡೆಗಟ್ಟಲು ಟಾಸ್ಕ್ಫೋರ್ಸ್ ರಚಿಸುತ್ತೇವೆ ಎಂದರು.

3. Renukaswamy Murder ಇನ್ನೆರೆಡು ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿರುವ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಪ್ರಕರಣದಲ್ಲಿ ನಮ್ಮ ತನಿಖೆ ಪೂರ್ಣಗೊಂಡಿದ್ದು, ಚಾರ್ಜ್ ಶೀಟ್ ಈಗಾಗಲೇ ತಯಾರಾಗಿದೆ. ಆರೋಪ ಪಟ್ಟಿಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ನೀಡಿ ಸಲಹೆಗಳನ್ನು ಪಡೆಯಲಾಗಿದ್ದು, ಕೆಲ ಬದಲಾವಣೆ ಮಾಡುವಂತೆ ಸೂಚಿಸಿದ್ದಾರೆ. ಆ ಬದಲಾವಣೆಗಳ ಬಳಿಕ ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ ಎಂದರು. ಚಾರ್ಜ್ ಶೀಟ್ ನಲ್ಲಿ ಎ1 ಆಗಿ ದರ್ಶನ್ ರನ್ನು ಹೆಸರಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್, A1, A2 ಯಾರು ಎಂದು ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ನಿರ್ಧರಿಸುತ್ತಾರೆ ಹೊರತು ನಾನಲ್ಲ ಎಂದು ಹೇಳಿದರು.

4. ಮುಡಾ ಹಗರಣದಲ್ಲಿ ಮೊದಲ ತಲೆದಂಡ: ಮಾಜಿ ಅಧ್ಯಕ್ಷ ಜಿಟಿ ದಿನೇಶ್ ಕುಮಾರ್ ಅಮಾನತು

ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಮುಡಾ ಹಗರಣದಲ್ಲಿ ಮೊದಲ ತಲೆದಂಡವಾಗಿದೆ. ರಾಜ್ಯಪಾಲರ ಆದೇಶದ ಹಿನ್ನೆಲೆಯಲ್ಲಿ ಹಿಂದಿನ ಆಯುಕ್ತ ಜಿಟಿ ದಿನೇಶ್ ಕುಮಾರ್ ರನ್ನು ಅಮಾನತು ಮಾಡಲಾಗಿದೆ. ದಿನೇಶ್ ಕುಮಾರ್ ರನ್ನು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕ ಮಾಡಲಾಗಿತ್ತು. ಈಗ ಅವರನ್ನು ಅಮಾನತು ಮಾಡಿ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ. ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಹಾಗೂ ದಿನೇಶ್ ಕುಮಾರ್ ಸರ್ಕಾರಕ್ಕೆ 5 ಸಾವಿರ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ. ಇವರಿಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವಕೀಲ ಅರುಣ್‌ಕುಮಾರ್ ಮೈಸೂರಿನ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದಿನೇಶ್‌ ಕುಮಾರ್‌ ಅಮಾನತು ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಕನಿಷ್ಟ ಈಗಲಾದರೂ ಲೂಟಿಕೋರ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

5. ಬೆಂಗಳೂರಿನಲ್ಲಿ ಅಪಘಾತದಲ್ಲಿ ತಮಿಳುನಾಡು ಮೂಲದ ವ್ಯಕ್ತಿ ಸಾವು

ಬೆಂಗಳೂರಿನ ಯಶವಂತಪುರ ಸರ್ಕಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿ, ನಾಲ್ವರು ಗಂಭೀರ ಗಾಯಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ 3.45ರ ಸುಮಾರಿಗೆ ಅಪಘಾತ ಸಂಭವಿಸಿದೆ. ಬೈಕ್ಗೆ ಗುದ್ದಿದ ಕಾರು ಫ್ಲೈಓವರ್ನಿಂದ ಕೆಳಗೆ ಬಿದ್ದಿದೆ. ಮೃತನನ್ನು ಸೇಲಂ ನಿವಾಸಿ 29 ವರ್ಷದ ಶಬರೀಶ್ ಎಂದು ಗುರ್ತಿಸಲಾಗಿದೆ. ಗಾಯಾಳುಗಳನ್ನು ಶಂಕರ್ ರಾಮ್, ಅನುಶ್ರೀ, ಮಿಥುನ್ ಹಾಗೂ ಮಂಜುನಾಥ್ ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com